ಬೆಂಗಳೂರು/ಕಲಬುರಗಿ: ಕೊರೋನಾ ಲಾಕ್ಡೌನ್‍ನಿಂದ ಸಂಕಷ್ಟದ ಖೆಡ್ಡಾದಲ್ಲಿ ಬಿದ್ದಿರುವ ರಾಜ್ಯದ ಜನ ಇನ್ನೂ ಸರಿಯಾಗಿ ಎದ್ದು ನಿಂತಿಲ್ಲ, ಈಗ ಸರಕಾರ ವಿದ್ಯುಚ್ಚಕ್ತಿ ದರ ಹೆಚ್ಚಳಕ್ಕೆ ಮುಂದಾಗಿರೋದು ಸರಿಯಾದಂತಹ ಕ್ರಮವಲ್ಲ ಎಂದಿರುವ ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ತಕ್ಷಣ ಸದರಿ ಕ್ರಮದಿಂದ ಹಿಂದಡಿ ಇಡಬೇಕು ಎಂದು ಸಿಎಂ ಯಡಿಯೂರಪ್ಪನವರಿಗ ಆಗ್ರಹಿಸಿದ್ದಾರೆ.
ಕೊರೊನಾದಿಂದ ಜನತೆ ಸಂಕಷ್ಟದಲ್ಲಿದ್ದಾರೆ, ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ. ಜನರ ಬಳಿ ಹಣವಿಲ್ಲ, ಇಂತಹ ಸಂದರ್ಭದಲ್ಲಿ ದರ ಏರಿಕೆ ಮಾಡಬಾgದು. ಕೊರೊನಾ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿರುವಾಗ ಉದ್ದಿಮೆಗಳು ನಷ್ಟ ಅನುಭವಿಸುತ್ತಿರುವಾಗ ಸರ್ಕಾರ ದರ ಏರಿಕೆ ಮಾಡಿರುವುದು ತಪ್ಪು. ಈ ದರ ಏರಿಕೆಯನ್ನ ಕೂಡಲೇ ವಾಪಸ್ ಪಡೆಯಬೇಕು ಎಂದು ಡಾ. ಅಜಯ್‍ಸಿಂಗ್ ಒತ್ತಾಯಿಸಿದ್ದಾರೆ.
ವಿದ್ಯುಚ್ಚಕ್ತಿ ದರ ಹೆಚ್ಚಳದ ಬದಲಿಗೆ ಸರಕಾರ ಇಂಧನ ದರಗಳನ್ನು ಕಡಿಮೆ ಮಾಡಲಿ, ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯದ ಪಾಲಿನ ಸುಂಕ ಹಿಂದಕ್ಕೆ ಪಡೆದು ಇವುಗಳ ದರ ಕಮ್ಮಿಯಾದಲ್ಲಿ ಮಾರುಕಟ್ಟೆಯಲ್ಲಿ ಆರ್ಥಿಕ ಚೇತರಿಗೆ ಕಾಣುತ್ತದೆ. ಇಂತಹ ಉಪಕ್ರಮಗಳನ್ನು ಕೈಗೊಳ್ಳದೆ ರಾಜ್ಯ ಸರಕಾರ ಮನಸೋ ಇಚ್ಚೆ ವರ್ತಿಸುತ್ತ ಜನರನ್ನು ಗೋಳು ಹುಯ್ದುಕೊಳ್ಳುತ್ತಿದೆ ಎಂದು ಡಾ. ಅಜಯ್ ಸಿಂಗ್ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.