ಬೆಂಗಳೂರು: ನವೆಂಬರ್ 3 ರಂದು ನಡೆದ ರಾಜರಾಜೇಶ್ವರಿ ನಗರದ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಈ ಕುರಿತು ಇಂದು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಾನ್ಯ ಆಯುಕ್ತರು ಮತ್ತು ಮಾನ್ಯ ನಗರ ಪೋಲಿಸ್ ಆಯುಕ್ತರು ರವರಿಂದ ಜಂಟಿ ಮಾಧ್ಯಮ ಗೋಷ್ಠಿ ಹಮ್ಮಿಕೊಂಡಿದ್ದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ-154ರ ಉಪಚುನಾವಣೆಯ ಮತ ಎಣಿಕೆ ಸಿದ್ದತೆಗೆ ಸಂಬಂಧಿಸಿದಂತೆ ಮಾನ್ಯ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಮತ್ತು ಮಾನ್ಯ ನಗರ ಪೋಲಿಸ್ ಆಯುಕ್ತರು ರವರು ಇಂದು ಜ್ಞಾನಾಕ್ಷಿ ವಿದ್ಯಾನಿಕೇತನ್ ಶಾಲೆ(ಮತ ಎಣಿಕೆ ಕೇಂದ್ರ)ಯಲ್ಲಿ ಜಂಟಿ ಮಾಧ್ಯಮ ಗೋಷ್ಠಿ ನಡೆಸಿದರು. ಈ ವೇಳೆ ವಿಶೇಷ ಆಯುಕ್ತರು ಶ್ರೀ ಜೆ.ಮಂಜುನಾಥ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಚುನಾವಣೆಯಲ್ಲಿ 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 4,62,236 ಮತದಾರರಲ್ಲಿ 2,09,828(ಶೇ.45.48) ಮತದಾರು ಮತದಾನ ಮಾಡಿದ್ದಾರೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಆಯುಕ್ತರು ತಿಳಿಸಿದರು.
ಮತ ಎಣಿಕೆಯ ಸಿಬ್ಬಂದಿ 3 ವಿಧದಲ್ಲಿದ್ದು, ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ ಗಳನ್ನು ಬೆಳಗ್ಗೆ 7 ಗಂಟೆಗೆ ಬರಲು ತಿಳಿಸಲಾಗಿದೆ. ಯಾರಿಗೆ ಗುರುತಿನ ಚೀಟಿ ನೀಡಲಾಗಿದೆ ಅಂತಹವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತದೆ. ಎಣಿಕೆ ಕಾರ್ಯವು 4 ಕೊಠಡಿಗಳಲ್ಲಿ 28 ಎಣಿಕಾ ಟೇಬಲ್ ಗಳನ್ನು ವ್ಯವಸ್ಥೆ ಮಾಡಿದ್ದು, ಹೆಚ್ಚುವರಿಯಾಗಿ 3 ಸಹಾಯಕ ಚುನಾವಣಾಧಿಕಾರಿಗಳನ್ನು ಎಣಿಕೆ ಕಾರ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 2 ಹಂತದ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೆ ಯಾವ ಟೇಬಲ್ ನಲ್ಲಿ ಕೂರಲಿದ್ದೇವೆ ಎಂಬುದು ತಿಳಿದಿರುವುದಿಲ್ಲ. ನಾಳೆ ಬೆಳಗ್ಗೆ ಬಂದ ಬಳಿಕ ತಿಳಿಯಲಿದ್ದು, 7.45ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಗುತ್ತದೆ. 8ಕ್ಕೆ ಪೋಸ್ಟಲ್ ಬ್ಯಾಲೆಟ್ ಗಳ ಎಣಿಕೆ ಪ್ರಾರಂಭವಾಗಲಿದ್ದು, 8.30ಕ್ಕೆ ಇ.ವಿ.ಎಂ ಎಣಿಕೆ ಪ್ರಾರಂಭವಾಗಲಿದೆ. 25 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಅಲ್ಲದೆ ಚುನಾವಣಾ ಆಯೋಗದ ನಿರ್ದೇಶನದಂತೆ ಇ.ವಿ.ಎಂ ಎಣಿಕೆ ಮುಗಿದ ನಂತರ 1 ಮತಗಟ್ಟೆಯ ವಿ.ವಿ.ಪ್ಯಾಟ್ ಅನ್ನು ಚುನಾವಣಾ ವೀಕ್ಷಕರು ಆರಿಸಲಿದ್ದು, 4 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳನ್ನು ಚುನಾವಣಾ ಅಭ್ಯರ್ಥಿಗಳು ಆರಿಸಲಿದ್ದಾರೆ. ಆ 5 ಮತಗಟ್ಟೆಗಳ ವಿ.ವಿ.ಪ್ಯಾಟ್ ಗಳಲ್ಲಿರುವ ಸ್ಲಿಪ್ ಎಣಿಕೆ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಿಬ್ಬಂದಿ ಎಣಿಕೆ ಕೇಂದ್ರದಲ್ಲಿ ಮೊಬೈಲ್/ಬ್ಯಾಗ್ ತರುವ ಹಾಗಿಲ್ಲ. ಏಜೆಂಟ್ ಗಳು ಕೂಡ ತರಲು ಅವಕಾಶವಿಲ್ಲ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಿದ್ದು, ಮಾಧ್ಯಮ ಕೇಂದ್ರಕ್ಕೆ ಮಾತ್ರ ಮೊಬೈಲ್ ಬಳಸಲು ಅವಕಾಶವಿರುತ್ತದೆ. ಕೋವಿಡ್ ಮುಂ ಜಾಗ ಕ್ರಮವಾಗಿ ಪ್ರತಿಯೊಬ್ಬರೂ ಕೂಡ ಮಾಸ್ಕ್ ಧರಿಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾಜಿಕ ಅಂತರ ಕೂಡ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ. ಅಭ್ಯರ್ಥಿಗಳ ಏಜೆಂಟ್ ಗಳು ಅಶಿಸ್ತು ತೋರಿದರೆ ಮುಲಾಜಿಲ್ಲದೆ ಹೊರಗಡೆ ಕಳುಹಿಸುತ್ತೇವೆ ಎಂದರು.
*ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಮಲ್ ಪಂತ್ ಮಾತನಾಡಿ, ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಪ್ರಕ್ರಿಯೆ ಶಾಂತ ರೀತಿಯಲ್ಲಿ ನಡೆದಿದ್ದು, ಇಂದು ಸ್ಟ್ರಾಂಗ್ ರೂಂ ಪರಿಶೀಲನೆ ನಡೆಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಬಂಧನೆಯಿರಲಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ. ಮುಖ್ಯ ದ್ವಾರದಲ್ಲಿ ಹೆಚ್ಚು ಪೊಲೀಸ್ ಭದ್ರತೆ ಇರಲಿದ್ದು, ಗುರುತಿನ ಚೀಟಿ ಪರಿಶೀಲನೆ ಮಾಡಿದ ಬಳಿಕ ಮತ ಎಣಿಕೆ ಕೇಂದ್ರದ ಒಳಗೆ ಕಳುಹಿಸಲಾಗುತ್ತದೆ ಎಂದರು.
ಮತ ಎಣಿಕೆ ಕೇಂದ್ರದಲ್ಲಿ 1 ಡಿ.ಸಿ.ಪಿ, 4 ಎ.ಸಿ.ಪಿ, 20 ಪಿ.ಐ, 48 ಪಿ.ಐ.ಸಿ, 76 ಎ.ಎಸ್.ಐ, 360 ಹೆಚ್.ಸಿ/ಪಿ.ಸಿ, 83 ಮಪ್ತಿ ಸೇರಿ 592 ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 899 ಸೇರಿದಂತೆ ಒಟ್ಟು 1,670 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 36 ಕೆ.ಎಸ್.ಆರ್.ಪಿ/ಸಿ.ಎ.ಆರ್ ಇರಲಿದ್ದಾರೆ. ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಾಳೆ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಜನ, ಕಾರ್ಯಕ್ರಮ ನಡೆಯುವ ಹಾಗಿಲ್ಲ. ಅಲ್ಲದೆ ಈ ಕ್ಷೇತ್ರದಲ್ಲಿ ಮದ್ಯವನ್ನು ಕೂಡಾ ನಿಷೇಧಿಸಿರಲಾಗಿರುತ್ತದೆ. ಕೋವಿಡ್ ಇರುವ ಪರಿಣಾಮ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಜೊತೆಗೆ ಯಾರೂ ಕೂಡ ಸಂಭ್ರಮಾಚರಣೆ/ಪಟಾಕಿ ಹಚ್ಚುವ ಹಾಗಿಲ್ಲ. ಯಾರಾರದು ಮಾಡಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.