ಕಲಬುರಗಿ: ಲಾಡ್ಲಾಪುರದಲ್ಲಿ ಕುರಿ ಕಳ್ಳರ ಹಾವಳಿ

0
42

ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಕುರಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಮನೆಯ ಮುಂದಿನ ದೊಡ್ಡಿಯಲ್ಲಿ ಕೂಡಿ ಹಾಕಿದ ಕುರಿಗಳು ರಾತ್ರಿ ವೇಳೆ ಕಳ್ಳರಪಾಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬುಧವಾರ (ನ.11) ತಡರಾತ್ರಿ ಗ್ರಾಮದ ಕುರಿಗಾಹಿ ಗುಲಾಮಸಾಬ ಖುರೇಶಿ ಎಂಬುವವರ ದೊಡ್ಡಿಯಿಂದ ಹತ್ತು ಕುರಿಗಳು ಕಾಣೆಯಾದ ಪ್ರಸಂಗ ಘಟಿಸಿದೆ.

ಕಲಬುರಗಿ ಮೂಲದ ಕುರಿ ಕಳ್ಳರ ಜಾಲವೇ ಈ ಕೈಚಳಕ ತೋರಿಸಿದೆ ಎಂಬ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ದೊಡ್ಡಿಯಲ್ಲಿ ಕಟ್ಟಲಾಗಿದ್ದ ಒಟ್ಟು ಹನ್ನೊಂದು ಕುರಿಗಳಲ್ಲಿ ನಡೆಯಲು ಬಾರದ ಒಂದು ಕುರಿಯನ್ನು ಬಿಟ್ಟು ಉಳಿದ ಹತ್ತು ಕುರಿಗಳು ಕಾಣೆಯಾಗಿದ್ದನ್ನು ಕಂಡ ಕುರಿಗಾಹಿ ಗುಲಾಮಸಾಬ ಖುರೇಶಿ, ಸಂಬಂದಿಕರ ಜತೆಗೂಡಿ ಗುರುವಾರ ನಡೆದ ವಿವಿಧ ಗ್ರಾಮಗಳ ವಾರದ ಸಂತೆಗೆ ಭೇಟಿನೀಡಿ ಹುಡುಕಾಟ ನಡೆಸಿದ್ದಾರೆ.

Contact Your\'s Advertisement; 9902492681

ಸಣ್ಣೂರ ಗ್ರಾಮದ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದ ಸಾವಿರಾರು ಕುರಿಗಳಲ್ಲಿ ತನ್ನ ಕುರಿ ಇರುವುದನ್ನು ಪತ್ತೆಹಚ್ಚಿದ ಗುಲಾಮಸಾಬ ಖುರೇಶಿ, ವ್ಯಾಪಾರಿಯ ರೂಪದಲ್ಲಿದ್ದ ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಲೇ ಏಳು ಕುರಿಗಳನ್ನು ಮಾರಾಟ ಮಾಡಿ ಮೂರು ಕುರಿಗಳ ವ್ಯಾಪಾರಕ್ಕೆ ನಿಂತಿದ್ದ ಆರೋಪಿ ರಾಚಯ್ಯಸ್ವಾಮಿ ಕಡಬೂರ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಗ್ರಾಮದಲ್ಲಿ ಪದೇಪದೆ ಕುರಿಗಳು ಕಳ್ಳತನವಾಗುತ್ತಿದ್ದವು. ಯಾರು ಕದಿಯುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಈಗ ಓರ್ವ ಆರೋಪಿ ಕೈಗೆ ಸಿಕ್ಕಿದ್ದಾನೆ. ಇದರ ಹಿಂದೆ ಇನ್ನೂ ಎಷ್ಟು ಜನರಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ಮಾಡುವ ಮೂಲಕ ಕುರಿಗಳ್ಳರ ಜಾಲವನ್ನು ಬೇಧಿಸಬೇಕು. ಅವರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ ಒತ್ತಾಯಿಸಿದ್ದಾರೆ.

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here