ಸುರಪುರ: ಹೆಚ್.ಡಿ.ಕುಮಾರಸ್ವಾಮಿ ಸೇನೆಯಿಂದ ನಗರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಸಸಿಗೆ ನೀರೆರೆಯುವ ಮೂಲಕ ತಹಸೀಲ್ದಾರ ಹಾಗು ತಾಲ್ಲೂಕು ದಂಡಾಧಿಕಾರಿ ಸುರೇಶ ಅಂಕಲಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ,ಹೆಚ್.ಡಿ.ಕುಮಾರಸ್ವಾಮಿ ಸೇನೆಯಿಂದ ಇಂದು ಪರಿಸರದ ಬಗ್ಗೆ ಕಾಳಜಿ ತೋರಿ ಅನೇಕ ಸಸಿಗಳ ನೆಡುವ ಮೂಲಕ ಎಲ್ಲರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಸಂಗತಿಯಾಗಿದೆ,ಯಾವುದೆ ಸಂಘ ಸಂಸ್ಥೆಗಳು ಇಂತಹ ಮುಖ್ಯವಾದ ಕಾರ್ಯಗಳನ್ನು ಮಾಡುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಆರಕ್ಷಕ ನಿರೀಕ್ಷಕ ಆನಂದರಾವ್ ಮಾತನಾಡಿ,ಸಂಘಟನೆಗಳು ಕೇವಲ ಹೋರಾಟಗಳಿಗೆ ಸೀಮಿತವಾಗದೆ ಪರಿಸರ ಕಾಳಜಿ,ಸಮಾಜಮುಖಿ ಚಿಂತನೆ ಹಾಗು ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುವುದು ಆರೋಗ್ಯಕರವಾಗಿದೆ.ಆ ನಿಟ್ಟಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸೇನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇನೆಯ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ನಮ್ಮ ಸಂಘಟನೆಯು ನಿತ್ಯವು ಜನರ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಶ್ರಮಿಸುವ ಸಂಕಲ್ಪ ಮಾಡಿದ್ದು,ನಿತ್ಯವು ಹೋರಾಟದ ಜೊತೆಗೆ ಪರಿಸರ ರಕ್ಷಣೆ,ಮಕ್ಕಳ ಶಿಕ್ಷಣ ಮತ್ತು ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಇಂದು ಪರಿಸರ ದಿನದಲ್ಲಿ ಅನೇಕ ಸಸಿಗಳನ್ನು ವಿತರಿಸಲಾಗುತ್ತಿದ್ದು,ಸಸಿಗಳನ್ನು ತೆಗೆದುಕೊಂಡವರು ಮಕ್ಕಳಂತೆ ಜೋಪಾನ ಮಾಡುವಂತೆ ವಿನಂತಿಸಿದರು.
ಇದೇ ಸಂದರ್ಭದಲ್ಲಿ ನೂರಕ್ಕು ಹೆಚ್ಚು ಜನರಿಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದ ವೇದಿಕೆ ಮೇಲೆ ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಜೆ.ಡಿ.ಎಸ್ ತಾಲ್ಲೂಕಾಧ್ಯಕ್ಷ ಮಲ್ಲಯ್ಯ ಕಮತಗಿ,ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ,ವೆಂಕಟೇಶ ಭಕ್ರಿ, ರಾಜಾ ಪಿಡ್ಡನಾಯಕ ಪ್ಯಾಪ್ಲಿ,ರಾಜಾ ಹರ್ಷವರ್ಧನ ನಾಯಕ,ಗೋಪಾಲ ಬಾಗಲಕೋಟೆ,ಹಣಮಂತ ವಾಗಣಗೇರಾ,ಬಸವರಾಜ ಕವಡಿಮಟ್ಟಿ,ಮಾನಯ್ಯ ದೊರೆ,ಕೇಶಣ್ಣ ದೊರೆ,ದೇವಪ್ಪ ರತ್ತಾಳ,ಕೃಷ್ಣಾ ದಿವಾಕರ ಸೇರಿದಂತೆ ಅನೇಕರಿದ್ದರು.