ಕಲಬುರಗಿ: ಸೇಡಂ ತಾಲೂಕಿನ ಇಟಕಲ್, ಮದನಾ ಮತ್ತು ಕೋಲಕುಂದಾ, ಅಫಜಲಪುರ ತಾಲೂಕಿನ ಕಲ್ಲೂರ ಮತ್ತು ಚೌಡಾಪುರ ಹಾಗೂ ಆಳಂದ ತಾಲೂಕಿನ ಸರಸಂಬಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಸ್ಥಳೀಯ ಪಂಚಾಯಿತಿ ವ್ಯಾಪ್ತಿಗೆ ವ್ಯಾಪ್ತಿಗೊಳಪಟ್ಟಿದ್ದು, ಈ ಕುರಿತು ದೃಢೀಕರಣ ಪತ್ರ ಲಗತ್ತಿಸಿರಬೇಕು. ನಿಗದಿತ ಮೀಸಲಾತಿಗೊಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮೇಲ್ವಿಚಾರಕರಿಗೆ ಪ್ರತಿ ತಿಂಗಳು 7000 ರೂ.ಗಳ ಗೌರವ ಸಂಭಾವನೆ ನೀಡಲಾಗುತ್ತದೆ. ಈ ಗ್ರಂಥಾಲಯದ ಮೇಲ್ವಿಚಾರಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಿನಿವಿಧಾನ ಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 26 ರಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ (ಮುಚ್ಚಿದ ಲಕೋಟೆಯನ್ನು) ಅವಶ್ಯಕ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಿ ಸಂಬಂಧಪಟ್ಟ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ 2020ರ ಡಿಸೆಂಬರ್ 17 ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ಹುದ್ದೆಗಳ ಮೀಸಲಾತಿ, ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-221069ನ್ನು ಸಂಪರ್ಕಿಸಲು ಕೋರಿದೆ.