ನನ್ನ ನಲ್ಮೆಯ ಜನತೆಗೆ ನಿಮ್ಮ ಪ್ರಿಯಾಂಕ್ ಖರ್ಗೆ ಮಾಡುವ ನಮಸ್ಕಾರಗಳು.
ಪ್ರತಿ ವರ್ಷ ನವೆಂಬರ್ 22 ರಂದು ನನ್ನ ಜನ್ಮದಿನವನ್ನು ತಮ್ಮ ಮನೆ ಮಗನ ಹುಟ್ಟುಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೀರಿ. ನಿಮ್ಮ ಈ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುತ್ತೇನೆ.
ಕಳೆದ ಬಾರಿ ಇದೇ ಸಮಯದಲ್ಲಿ ರಾಜ್ಯದ ಜನತೆ ಭೀಕರ ಪ್ರವಾಹದಿಂದಾಗಿ ತತ್ತರಿಸಿದ ಕಾರಣ ನಾನು ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೆ. ಈ ಬಾರಿಯೂ ಕಲಬುರಗಿ ಜನತೆ ನೆರೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೊರೋನಾದಿಂದಾಗಿ ಹಲವರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುವುದು ಸಮಂಜಸವಲ್ಲ ಎಂಬುದು ನನ್ನ ಭಾವನೆ.
ಪ್ರತಿ ವರ್ಷವೂ ನಿಮ್ಮದೇ ಸ್ವಂತ ಖರ್ಚಿನಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಿರಿ. ಈ ಬಾರಿ ಅದೇ ಹಣದಲ್ಲಿ ನೆರೆ ಸಂತ್ರಸ್ತರು, ನಿರ್ಗತಿಕರು ಹಾಗೂ ಬಡವರಿಗೆ ಸಹಾಯಹಸ್ತ ಚಾಚಬೇಕೆಂದು ಮನವಿ ಮಾಡುತ್ತೇನೆ. ವೈಯಕ್ತಿಕ ಕಾರ್ಯನಿಮಿತ್ತ ನವೆಂಬರ್ 22 ರಂದು ನಾನು ಬೆಂಗಳೂರು ಅಥವಾ ಕಲಬುರಗಿಯಲ್ಲಿ ಇರುವುದಿಲ್ಲ. ಆದ್ದರಿಂದ, ನನ್ನ ಹುಟ್ಟುಹಬ್ಬದ ಆಚರಣೆಗೆ ಯಾವುದೇ ಸಿದ್ಧತೆ ಮಾಡಿಕೊಳ್ಳಬಾರದೆಂದು ತಮ್ಮೆಲ್ಲರಲ್ಲೂ ವಿನಯಪೂರ್ವಕ ಮನವಿ ಮಾಡಿಕೊಳ್ಳುತ್ತೇನೆ.
ನನ್ನ ಈ ನಿರ್ಧಾರವನ್ನು ತಾವೆಲ್ಲರೂ ಬೆಂಬಲಿಸುತ್ತೀರೆಂದು ಭಾವಿಸಿದ್ದೇನೆ.
ಧನ್ಯವಾದಗಳು