ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದ ಸೋಲಾಪೂರ್ ಜಿಲ್ಲೆಯ ಸುಕ್ಷೇತ್ರ ಪಂಢರಪೂರ್‍ನಲ್ಲಿ ನಡೆಯಲಿರುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ರಾಜ್ಯದಿಂದ ದಿಂಡಿಸ ಮತ್ತು ಪಲ್ಲಕ್ಕಿಯೊಂದಿಗೆ ಸಾರ್ವಜನಿಕರು (ಭಕ್ತರು) ತೆರಳುವುದಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವಿ.ವಿ. ಜೋತ್ನ್ಸಾ ಆದೇಶಿಸಿದ್ದಾರೆ.
ಪ್ರತಿವರ್ಷ ಮಹಾರಾಷ್ಟ್ರ ರಾಜ್ಯದ ಸೋಲಾಪೂರ್ ಜಿಲ್ಲೆಯ ಸುಕ್ಷೇತ್ರ ಪಂಢರಪೂರದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ರಾಜ್ಯಗಳಿಂದ ಸುಮಾರು 5ರಿಂದ 6 ಲಕ್ಷ ಭಕ್ತಾದಿಗಳು ಪ್ರತ್ಯೇಕ ತಂಡಗಳೊಂದಿಗೆ ಸುಕ್ಷೇತ್ರಕ್ಕೆ ಬರುತ್ತಿರುವುದು ವಾಡಿಕೆಯಾಗಿತ್ತು.
ಸದ್ಯದ ಕೋವಿಡ್ ವೈರಾಣು ನಿಯಂತ್ರಣಕ್ಕಾಗಿ ಸೋಲಾಪೂರ್ ಜಿಲ್ಲಾಡಳಿತ ಮುನ್ನೆಚ್ಚರಿಕೆಗಾಗಿ ಸಿಆರ್‍ಪಿಸಿ ಕಲಂ 144ರನ್ವಯ ನವೆಂಬರ್ 24ರಿಂದ 26ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞ್ಷೆ ಮತ್ತು ಬಾಂಬೆ ಪೊಲೀಸ್ ಕಾಯ್ದೆ 37 ರನ್ವಯ 5 ಜನಕ್ಕಿಂತ ಹೆಚ್ಚಿಗೆ ಜನ ಸೇರುವುದು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಿಂದ ಪಂಢರಾಪೂರಕ್ಕೆ ತೆರಳುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.