ಜೇವರ್ಗಿ; ತಾಲೂಕಿನ ಕೂಡಿ ದರ್ಗಾದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಖಾಸಗಿ ವೈದ್ಯರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಡಾ. ಸಿದ್ದು ಪಾಟೀಲ್ ಅವರು ಮಾತನಾಡಿ ಇವತ್ತು ವಿಶ್ವದಲ್ಲಿ ಮಹಾಮಾರಿ ಕೊರೋನ ವೈರಸ್ ಕಳೆದ ವರ್ಷದ ಜನೇವರಿಯಿಂದ ಇಲ್ಲಿಯವರೆಗೂ ವೈರಸ್ ನ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಕೆಲ ದಿನಗಳಿಂದ ಗಮನಿಸಿದರೆ ಕರೋನಾ ಪಾಸಿಟಿವ್ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಖುಷಿಯ ವಿಚಾರವಾಗಿದ್ದು, ಆದರೂ ಕೂಡ ನಾವು-ನೀವೆಲ್ಲರೂ ಈ ವೈರಸ್ ಬಗ್ಗೆ ಅಸಡ್ಡೆ ತೋರದೆ ಮುನ್ನಚ್ಚರಿಕೆ ಕ್ರಮಗಳು ಪಾಲಿಸುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಮುಂಬರುವ ಡಿಸೆಂಬರ್ ನಲ್ಲಿ ಚಳಿಗಾಲ ಅಧಿಕವಾಗಿರುವುದರಿಂದ ತಣ್ಣನೆಯ ವಾತಾವರಣದಿಂದ ಜನರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು ಇವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ 19 ವೈರಸ್ನ ಸೋಂಕು ತಗುಲದೆ ಇರಬೇಕಾದರೆ ಮಾಸ್ಕ್, ಸ್ಯಾನಿಟೈಸರ್, ಹಾಗೂ ಸಾಮಾಜಿಕ ಅಂತರ ಬಹಳ ಮುಖ್ಯವಾಗಿದೆ , ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ,ಸೀನುವಾಗ, ಮುಖಕ್ಕೆ ಅಡ್ಡಲಾಗಿ ಕರವಸ್ತ್ರ, ಮಾಸ್ಕ್ ಗಳನ್ನು ಬಳಸಿದರೆ ಒಳ್ಳೆಯದು ಎಂದು ಜನರಿಗೆ ಕೋವಿಡ್ 19 ಬಗ್ಗೆ ಆರೋಗ್ಯದ ಸಲಹೆಯನ್ನು ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖಾಸಗಿ ವೈದ್ಯರ ಸಂಘ ಜೇವರ್ಗಿಯ ಸೆಕ್ರೆಟರಿ ಆಗಿರುವ ಡಾ. ನಬಿ ಪಟೇಲ್ ರವರು ಮಾತನಾಡಿ ಈ ಕಾರ್ಯಕ್ರಮವನ್ನು ಕೂಡಿ ದರ್ಗಾದಲ್ಲಿಯೆ ಮಾಡಲು ಪ್ರಮುಖ ಕಾರಣವೆಂದರೆ ಕೆಲ ದಿನಗಳ ಹಿಂದಷ್ಟೇ ಕರ್ನಾಟಕ-ಮಹಾರಾಷ್ಟ್ರದ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೀಮಾನದಿಯ ದಂಡೆಯ ತಾಲೂಕಿನ ಗ್ರಾಮಗಳಾದ ಕೂಡಿ, ಕೋಬಾಳ, ಮಂದರವಾಡ, ರದ್ದೇವಾಡಗಿ, ಕೋಳಕೂರ, ರಾಸಣಗಿ, ಹಂದನೂರು, ಇನ್ನಿತರ ಗ್ರಾಮಗಳೂ ಪ್ರವಾಹಕ್ಕೆ ತುತ್ತಾಗಿ ಜನರು ಮನೆಮಠಗಳನ್ನು ಕಳೆದುಕೊಂಡು ಕಳೆದುಕೊಂಡು ಬೀದಿ ಪಾಲಾಗಿದ್ದರು.
ಇಂತಹ ಸಂದರ್ಭದಲ್ಲಿ ಯಾವುದೇ ಕೊರೋನಾ ವೈರಸ್ ನಿಯಮಗಳನ್ನು ಪಾಲನೆ ಮಾಡುವಂತೆ ಸ್ಥಿತಿಯಲ್ಲಿ ಈ ಹಳ್ಳಿಗಳ ಜನರು ಇರಲಿಲ್ಲ, ಈ ಕಾರಣವಾಗಿ ನಮ್ಮ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜೇವರ್ಗಿ ಖಾಸಗಿ ವೈದ್ಯರ ಸಂಘದವರು ಒಂದೆಡೆ ಸಭೆ ಸೇರಿ ಕೂಡಿ ದರ್ಗಾದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುವುದರಿಂದ ತುಂಬಾ ಅನುಕೂಲಕರವಾಗಿದ್ದು, ಎಲ್ಲಾ ಹಳ್ಳಿಗಳ ಮಧ್ಯದಲ್ಲಿರುವುದರಿಂದ ಎಲ್ಲಾ ಹಳ್ಳಿಗಳ ಜನರ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ಚಿಕಿತ್ಸಾ ಶಿಬಿರಕ್ಕೆ ಸಹಾಯವಾಗುತ್ತದೆ ಎಂಬ ದೃಷ್ಟಿಯಲ್ಲಿ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವೈದ್ಯರು ಮಾತನಾಡಿದರು.
ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಡಾಕ್ಟರ್ ಪಿ.ಎಂ ಮಠ್, ಕಾರ್ಯಕ್ರಮದ ನಿರೂಪಣೆಯನ್ನು ಡಾ. ಪ್ರಶಾಂತ್ ಪಾಟೀಲ್, ವಂದನಾರ್ಪಣೆಯನ್ನು ಡಾ. ಮಹಾಂತೇಶ ಹಿರೇಮಠ ನೆರವೇರಿಸಿದರು.
ಖಾಸಗಿ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಅಮರೇಶ್ ಕೊಳಕೂರ್, ರೆಡ್ ಕ್ರಾಸ್ ಸಂಸ್ಥೆ ಕಲಬುರಗಿಯ ಅಧ್ಯಕ್ಷರಾದ ಅರುಣ್ ಕುಮಾರ್ ಲೋಯಾ, ಆಯುಷ್ ವೈದ್ಯಾಧಿಕಾರಿಗಳಾದ ಡಾಕ್ಟರ್ ಸಾದತ್ ಹುಸೇನ್, ಕಾರ್ಯಕ್ರಮದ ಅತಿಥಿಗಳಾದ ಮೆಹಬೂಬ್ ಪಟೇಲ್ ಕೋಬಾಳ್, ಶಿವನಗೌಡ ಪಾಟೀಲ್ ಮಂದರವಾಡ್, ಬಸವರಾಜ್ ಜೆಮಶೆಟ್ಟಿ, ರಾಯಗುಂಡಪ್ಪ ಕೋನಹಿಪ್ಪರಗಾ, ರುಕುಂ ಪಟೇಲ್ ಕೂಡಿ, ಅರುಣ್ ಗೌಡ ಮಾಲಿ ಪಾಟೀಲ್ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.