ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ೪೧ ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ರ ಭಾಗವಾಗಿ ಕಲ್ಯಾಣ ರಾಜ್ಯ-ಶರಣರ ಪರಿಕಲ್ಪನೆ ವಿಷಯ ಕುರಿತಾಗಿ ಗೋಷ್ಠಿ-೨ ಆಯೋಜಿಸಲಾಗಿತ್ತು. ಮಾಜಿ ಗೃಹಸಚಿವ ಹಾಗೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಗೋಷ್ಠಿ ಅಧ್ಯಕ್ಷತೆ ವಹಿಸಿ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ವಿಶ್ವಕ್ಕೆ ವಿನೂತನ ಕ್ರಾಂತಿಯ ಕೊಡುಗೆಯನ್ನು ನೀಡಿದರು. ಅಂದಿನ ರಾಜಶಾಹಿ ಮತ್ತು ಪೂರೋಹಿತಶಾಹಿ ವ್ಯೆವಸ್ಥೆಯಲ್ಲಿಯೂ ಜಾತಿಯತೆಯ ನಿರ್ಮೂಲನೆ, ಸ್ತ್ರೀಸಮಾನತೆ, ಮೂಢನಂಬಿಕೆ ವಿರುದ್ಧವಾಗಿರುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಶರಣರು ಜನಭಾಷೆಯಾಗಿರುವ ಕನ್ನಡದಲ್ಲಿ ಧರ್ಮವನ್ನು ಭೋಧಿಸಿದರು. ಶರಣರು ಮಾಡಿದ ಸಾಮಾಜಿಕ ಧಾರ್ಮಿಕ ಪರಿವರ್ತನೆ ದೇಶದ ಇತಿಹಾಸದಲ್ಲಿಯೇ ಅಪರೂಪವಾದದ್ದು. ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ನಾವೆಲ್ಲರು ಒಗ್ಗೂಡಿ ಬಸವಧರ್ಮ ಪ್ರಸಾರ ಮಾಡಬೇಕಾಗಿದೆ. ರಾಜ್ಯ ರಾಷ್ಟ್ರ ಅಲ್ಲದೇ ಸಾಗರೋತ್ತರವಾಗಿ, ವಿಶ್ವವ್ಯಾಪಿಯಾಗಿ ಬಸವಪ್ರಣಿತ ಲಿಂಗಾಯತ ಧರ್ಮವನ್ನು ಪ್ರಸಾರಗೊಳಿಸಬೇಕಾಗಿದೆ. ಲಿಂಗಾಯತ ಧರ್ಮ ಜೈನ, ಬೌಧ, ಸಿಖ್, ಇಸ್ಲಾಂ ಧರ್ಮಗಳ ಹಾಗೆ ಜಾಗತಿಕ ಧರ್ಮವಾಗಬೇಕಾಗಿದೆ. ಬಸವಸಂಸ್ಕೃತಿ ವಿಶ್ವ ಸಂಸ್ಕೃತಿಯಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರು ಬಿ.ಶ್ರೀರಾಮುಲು ಎಲ್ಲಾ ಜಾತಿಯವರಿಗೆ ಸಮಾನವಾಗಿ ಬೆಳೆಯಲು ಸಮಾನ ಅವಕಾಶ ಕೊಟ್ಟದ್ದು ಲಿಂಗಾಯತ ಧರ್ಮ. ಮಾನವ ಕುಲದ ಸಮಗ್ರ ಅಭಿವೃದ್ಧಿಗೆ ಲಿಂಗಾಯತ ಸಿದ್ಧಾಂತಗಳು ಅವಶ್ಯಕವಾಗಿವೆ. ಅಂತಹ ಬಸವಕಲ್ಯಾಣದಿಂದ ೨೦೧೨ ರಲ್ಲಿ ಪಾದಯಾತ್ರೆ ಆರಂಭಿಸಿದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು. ಬೀದರ ಸಂಸದ ಭಗವಂತ ಖೂಬಾ ಒಂಭೈನೂರು ವರ್ಷಗಳ ಹಿಂದೆ ಸಮಸಮಾಜ ಕಲ್ಪನೆಯ ಅನುಭವಮಂಟಪದ ವೇದಿಕೆ ಕೊಟ್ಟದ್ದು ಶರಣರ ಅದ್ಭುತ ಕೊಡುಗೆಯಾಗಿದೆ. ಲಿಂಗಭೇದವಿಲ್ಲದ ಸಮಸಮಾಜ ನಿರ್ಮಾಣವಾಗಬೇಕೆಂಬ ಅನುಭವಮಂಟಪ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾಗಿದೆ ಅದಕ್ಕೆ ನಮ್ಮದು ಸಂಪೂರ್ಣ ಬೆಂಬಲ ಇರುತ್ತದೆ ಎಂದರು. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಮಹಿಳೆಯರಿಗೆ ಪುರುಷರ ಸಮಾನವಾಗಿ ಬೆಳೆಯುವ ಸ್ವಾತಂತ್ರ್ಯ ಕೊಟ್ಟವರು ಬಸವಾದಿ ಶರಣರು. ಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಚರಿತ್ರೆಗಳು ಪಠ್ಯಪುಸ್ತಕಗಳಾಗಿ ಇಂದು ಮಕ್ಕಳಿಗೆ ಲಭ್ಯವಾಗಬೇಕಾಗಿದೆ ಎಂದರು.
ಗೋಷ್ಠಿಯಲ್ಲಿ ಕಲ್ಯಾಣ ರಾಜ್ಯ-ಶರಣರ ಪರಿಕಲ್ಪನೆ ವಿಷಯವಾಗಿ ಹುನ್ನೂರು ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರು ಅನುಭವಮಂಟಪದ ಮೂಲ ಗುರಿ ಕಲ್ಯಾಣ ರಾಜ್ಯ ನಿರ್ಮಾಣವೇ ಆಗಿತ್ತು. ಸ್ತ್ರೀಕುಲಕ್ಕೆ ಮಹಾದೇವಿ ಪಟ್ಟಕಟ್ಟಿ ಅವರನ್ನು ಪ್ರಮುಖ ವಾಹಿನಿಗೆ ತಂದ ಕೀರ್ತಿ ಶರಣರಿಗೆ ಸಲ್ಲುತ್ತದೆ. ಸಮಸಮಾಜ ನಿರ್ಮಾಣ ಶರಣರ ಆಶಯವಾಗಿತ್ತು. ಅಂತಹ ಕಲ್ಯಾಣರಾಜ್ಯದ ಪ್ರವೇಶಕ್ಕೆ ಮನದಲ್ಲಿ ಭಕ್ತಿ ಕೈಯಲ್ಲಿ ಕಾಯಕ ಹೃದಯದಲ್ಲಿ ಶಿವಾನುಭವ ಇರಬೇಕೆಂದರು. ರಾಮದುರ್ಗದ ಶರಣ ಸಾಹಿತಿ ಪ್ರೊ.ಸಿದ್ಧಣ್ಣ ಲಂಗೋಟಿ ಶಿವಪಂಚಾಯತಗಳಾದ ಅನ್ನ, ಅರಿವೆ, ಆಶ್ರಯ, ಶಿಕ್ಷಣ, ಔಷಧೋಪಚಾರ ಸುಲಭವಾಗಿ ಜನಸಾಮಾನ್ಯರಿಗೆ ಸಿಗಬೇಕು. ಗ್ರಾಮೀಣ ಉದ್ಯೋಗಗಳಾದ ಕುಂಬಾರಿಕೆ, ಬಡಿಗೆತನ, ಕಮ್ಮಾರಿಗೆ ಮುಂತಾದವುಗಳಿಂದ ಕಲ್ಯಾಣ ರಾಜ್ಯ ಸಮೃದ್ಧಿಗೊಂಡಿತ್ತು. ನೀಡುವವರುಂಟು ಬೇಡುವವರಿಲ್ಲ ಎಂಬ ಮಟ್ಟಿಗೆ ಬೆಳೆಯಿತು. ಸರ್ವರಿಗೆ ಸಮಬಾಳು ಸಮಪಾಲು ಎಂಬ ಘೋಷವಾಕ್ಯ ೧೧೪೦ ರಲ್ಲಿ ಸ್ಥಾಪನೆಯಾದ ಅನುಭವಮಂಟಪ ಮೂಲಕ ಹೊರಹೊಮ್ಮಿತು. ಇಂಗ್ಲೇಡ ದೇಶದಲ್ಲಿ ಪ್ರಜಾಪ್ರಭುತ್ವ ಇದಾದನಂತರ ೭೫ ವರ್ಷಗಳ ನಂತರದಲ್ಲಿ ಹುಟ್ಟಿಕೊಂಡಿತ್ತು. ಶರಣರು ಸ್ಥಾಪಿಸಿದ ಅನುಭವಮಂಟಪದಲ್ಲಿ ೭೭೦ ಅಮರಗಣಂಗಳು ಚರ್ಚೆ ಮುಕ್ತ ಚರ್ಚೆ ನಡೆಸಿದರು. ಹಾಗಾಗಿ ಜಾತಿರಹಿತ ಲಿಂಗಾಯತ ಧರ್ಮ ಅಂದೆ ಸ್ಥಾಪನೆಯಾಯಿತು ಎಂದರು.
ಈ ಗೋಷ್ಠಿಯ ಸನ್ನಿಧಾನ ವಹಿಸಿದ್ದ ತುಮಕೂರು ಸಿದ್ಧಗಂಗಾಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಶರಣ ಸಿದ್ಧಾಂತ ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವ ಕೀರ್ತಿ ಭಾಲ್ಕಿ ಮಠಕ್ಕೆ ಸಲ್ಲುತ್ತದೆ. ಬಸವಾದಿ ಶರಣರು ಸ್ಥಾಪಿಸಿದ ಅನುಭವಮಂಟಪದಲ್ಲಿ ಅಂದು ತತ್ವ ಚಿಂತನ ನಡೆದು ಸಮಾಜದ ಮೌಢ್ಯತೆ ಹೋಗಲಾಡಿಸುವಲ್ಲಿ ಕಾರ್ಯ ಮಾಡಿದ್ದು ಸ್ತುತ್ಯವಾಗಿದೆ. ಹಾಗಾಗಿ ಜನಪದರು ಎಲ್ಲ ಬಲ್ಲಿದನಯ್ಯಾ ಬಸವಯ್ಯನು ಎಂದು ಹೃದಯ ತುಂಬಿ ಹಾಡಿದ್ದಾರೆ ಎಂದರು. ಬೀದರ ಲಿಂಗಾಯತ ಮಹಾಮಠದ ಪೂಜ್ಯ ಅಕ್ಕಅನ್ನಪೂರ್ಣತಾಯಿ ಅನುಭವಮಂಟಪ ಉತ್ಸವ ಅದು ಯುಗದ ಉತ್ಸಾಹವಾಗಿದೆ. ರಾಷ್ಟ್ರದ ನಿಜವಾದ ಸಂಪತ್ತು ಎಂದರೆ ವಿಚಾರಶೀಲ ಚಿಂತನಶೀಲ ಜನಾಂಗವನ್ನು ಹೊಂದುವುದು. ನೈತಿಕತೆ ತಳಹದಿಯ ಮೇಲೆ ಬದುಕಲು ಶರಣರ ವಚನ ಸಾಹಿತ್ಯ ಛಲಬೇಕು ಶರಣಂಗೆ ಪರಧನವಲೊಲ್ಲೆನೆಂಬ ನುಡಿ ಮರೆಯುವಂತಿಲ್ಲ. ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಇದು ಮೂಲ ಬೇರು ಆಗಿದೆ ಎಂದರು. ಬಸವಕಲ್ಯಾಣ ಅನುಭವಮಂಟಪದ ಪೂಜ್ಯ ನಿರಂಜನ ಮಹಾಸ್ವಾಮಿಗಳು ಮಾತಾಡಿದರು.
ಬಸವಕಲ್ಯಾಣ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುನಾಥ ಗಡ್ಡೆ ಸ್ವಾಗತಿಸಿದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು.