ಕಲಬುರಗಿ: ಜಿಲ್ಲೆಯ 261 ಗ್ರಾಮ ಪಂಚಾಯತಿಗಳ ಪೈಕಿ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದ್ದು, ಅದರಂತೆ ಸದರಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಸದರಿ ನೀತಿ ಸಂಹಿತೆ ಡಿಸೆಂಬರ್ 31ರ ಸಂಜೆ 5 ಗಂಟೆ ವರೆಗೆ ಇರಲಿದೆ. ಗ್ರಾಮ ಪಂಚಾಯತಿಯ ಚುನಾವಣೆ ನೀತಿ ಸಂಹಿತೆಯು ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗೀಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಮತಪೆಟ್ಟಿಗೆ ಮೂಲಕ ನಡೆಯಲಿದ್ದು, ಕೋವಿಡ್-19 ಕಾರಣ ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಕಲಬುರಗಿ ತಾಲೂಕಿನ 28, ಆಳಂದ ತಾಲೂಕಿನ 36, ಅಫಜಲಪೂರ ತಾಲೂಕಿನ 28, ಕಮಲಾಪೂರ ತಾಲೂಕಿನ 16, ಕಾಲಗಿ ತಾಲೂಕಿನ 14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 126 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಯಡ್ರಾಮಿ ತಾಲೂಕಿನ 15, ಜೇವರ್ಗಿ ತಾಲೂಕಿನ 23, ಚಿತ್ತಾಪೂರ ತಾಲೂಕಿನ 24, ಚಿಂಚೋಳಿ ತಾಲೂಕಿನ 27 ಹಾಗೂ ಸೇಡಂ ತಾಲೂಕಿನ 27 ಸೇರಿದಂತೆ ಒಟ್ಟು 116 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.
ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಇನ್ನೀತರ ಕಾರಣದಿಂದ ಜಿಲ್ಲೆಯ 19 ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮೊದಲನೇ ಹಂತದ ಚುನಾವಣೆಗೆ ಡಿ.7 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ಡಿ.12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.14 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿರುತ್ತದೆ.
ಮತದಾನ ಅವಶ್ಯವಿದ್ದರೆ ಡಿ.22 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತ್ತು ಮರು ಮತದಾನದ ಅವಶ್ಯವಿದ್ದರೆ ಡಿ.24 ರಂದು ನಡೆಸಲಾಗುವುದು. ಅದೇ ರೀತಿ ಎರಡನೇ ಹಂತದ ಚುನಾವಣೆಗೆ ಡಿ.11 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಡಿ.16 ಕೊನೆಯ ದಿನವಾಗಿದ್ದು, ಡಿ.17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.19 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಡಿ.27 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತ್ತು ಮರು ಮತದಾನದ ಅವಶ್ಯವಿದ್ದರೆ ಡಿ.29 ರಂದು ನಡೆಸಲಾಗುವುದು. ಎರಡು ಹಂತದಲ್ಲಿ ನಡೆಯುವ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಾ ಕೇಂದ್ರದಲ್ಲಿ ನಡೆಸಿ ಡಿ.31ಕ್ಕೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಜಿಲ್ಲೆಯ 242 ಗ್ರಾಮ ಪಂಚಾಯತಿಗಳ 1427 ವಾರ್ಡುಗಳಿಗೆ ನಡೆಯುವ ಚುನಾವಣೆಗೆ ದಿ.31-08-2020ರ ಅರ್ಹ ಮತದಾರರ ಪಟ್ಟಿಯಂತೆ 676421 ಪುರುಷರು, 649872 ಮಹಿಳೆಯರು ಹಾಗೂ 107 ಇತರೆ ಮತದಾರರು ಒಳಗೊಂಡಂತೆ ಒಟ್ಟು 1326400 ಮತದಾರರು ಮತ ಚಲಾಯಿಸಲು ಹಕ್ಕು ಹೊಂದಿದ್ದಾರೆ.
ಚುನಾವಣೆ ಮತದಾನಕ್ಕೆ 243 ರಿಟರ್ನಿಂಗ್ ಅಧಿಕಾರಿಗಳು, 243 ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಹಾಗೂ 52 ಹೆಚ್ಚುವರಿ ಅಧಿಕಾರಿಗಳು ಸೇರಿದಂತೆ ಒಟ್ಟು 269 ಅಧಿಕಾರಿಗಳನ್ನು ನೇಮಿಸಲಾಗಿದೆ. ಇದಲ್ಲದೆ ಪ್ರತಿ ತಾಲೂಕಿನ 1-2 ಗ್ರಾಮ ಪಂಚಾಯತಿಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿ ಚುನಾವಣೆ ನೀತಿ ಸಂಹಿತೆ ಮೇಲೆ ನಿಗಾ ವಹಿಸಲು ಸೂಚಿಸಲಾಗುವುದು ಹಾಗೂ ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಹ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ.
242 ಗ್ರಾಮ ಪಂಚಾಯತಿ ಚುನಾವಣೆಗೆ ಒಟ್ಟಾರೆ 1499 ಮೂಲ ಮತಗಟ್ಟೆ, 342 ಆಕ್ಸಲರಿ ಮತಗಟ್ಟೆ ಸೇರಿದಂತೆ ಒಟ್ಟು 1841 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಬೇಕು. ದೋಷರಹಿತ ಚುನಾವಣೆ ನಡೆಸಲು ಎಲ್ಲಾ ಅಧಿಕಾರಿಗಳ ವರ್ಗ ತಮಗೆ ನೀಡಲಾದ ಜವಾಬ್ದಾರಿಯನ್ನು ಚಾಚು ತಪ್ಪದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.