ಶಹಾಪುರ: ಹಿರಿಯ ವಕೀಲರ ಆದರ್ಶ ಮೌಲ್ಯಗಳನ್ನು ಯುವ ವಕೀಲರು ಗೌರವಿಸುವುದರ ಜೊತೆಗೆ ಸೂಕ್ತ ಮಾರ್ಗದರ್ಶನದಲ್ಲಿ ನಡೆಯಬೇಕು. ವಕೀಲ ವೃತ್ತಿಯು ಪವಿತ್ರವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ ಅವರು ತಿಳಿಸಿದರು.
ಇಲ್ಲಿನ ವಕೀಲರ ಸಂಘದಲ್ಲಿ ಶುಕ್ರವಾರ ವಕೀಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ವರ್ಷ ವಕೀಲ ವೃತ್ತಿ ಸೇವೆಯನ್ನು ಪೂರೈಯಿಸಿದ ಹಿರಿಯ ನ್ಯಾಯವಾದಿಗಳಾದ ಭಾಸ್ಕರರಾವ್ ಮುಡಬೂಳ ಹಾಗೂ ಶ್ರೀನಿವಾಸರಾವ ಕುಲಕರ್ಣಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ವಕೀಲರಾದ ನಿಂಗಣ್ಣ ಚಿಂಚೋಡಿ ಮಾತನಾಡಿ, ಸಾರ್ಥಕ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗೌರವಿಸುವುದು ಮಾನವಂತರ ಸಮಾಜವಾಗಿದೆ. ವಕೀಲರು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಕೀಲ ವೃತ್ತಿಗೆ ನಿವೃತ್ತಿ ಇಲ್ಲ. ಅದೊಂದು ಸೇವೆಯಾಗಿದೆ.ಹಿರಿಯ ವಕೀಲರ ಪಾಂಡಿತ್ಯವನ್ನು ನೆರಳಿನ ಆಸರೆಯಂತೆ ಪಡೆದುಕೊಳ್ಳಬೇಕು ಎಂದರು.
ಗೌರವ ಸನ್ಮಾನ ಸ್ವೀಕರಿಸಿದ ಹಿರಿಯ ವಕೀಲರಾದ ಭಾಸ್ಕರರಾವ ಹಾಗೂ ಶ್ರೀನಿವಾಸರಾವ ಕುಲಕರ್ಣಿ ಮಾತನಾಡಿ, ವಕೀಲರು ಎಂದಿಗೂ ನಿರಾಶೆಸರ್ಕಾರರದು. ವೈಯಕ್ತಿಯ ಜೀವನವನ್ನು ಬದಿಗಿಟ್ಟು ಇದೊಂದು ವೃತ್ತದಂತೆ ಕೆಲಸ ನಿರ್ವಹಿಸಬೇಕು. ನಿರಂತರ ಅಧ್ಯಯನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾವತ್ತು ವಕೀಲರು ನ್ಯಾಯಾಲಯದ ಕೋರ್ಟ್ ಕಲಾಪದಲ್ಲಿ ಸುಳ್ಳು ಹೇಳಬಾರದು. ನಿಜಾಂಶವನ್ನು ತಿಳಿಸಿ. ವೃತ್ತಿ ಘನತೆಯನ್ನು ಕಾಪಾಡಿಕೊಂಡು ಹೋಗಬೇಕು. ವಯಸ್ಸು ಹೆಚ್ಚಾದಂತೆ ಮನಸ್ಸು ಮಾಗಬೇಕು. ಒತ್ತಡದ ನಡುವೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ ಕಾರ್ಯದರ್ಶಿ ಸಂದೀಪ ದೇಸಾಯಿ,ಯಾದಗಿರಿ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ನಾಡಕರ್ ಇದ್ದರು.