ವಾಡಿ: ಬಿಜೆಪಿ ಸರಕಾರ ಅಂಗೀಕರಿಸಿರುವ ಹೊಸ ಕೃಷಿ ನೀತಿ, ಭೂ ಸುಧಾರಣಾ ತಿದ್ದುಪಡಿ, ವಿದ್ಯುತ್ ಕಾಯ್ದೆ ಹಾಗೂ ಖಾಸಗಿ ಮಾರುಕಟ್ಟೆ ಕಾಯ್ದೆಗಳನ್ನು ವಿರೋಧಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶುಕ್ರವಾರ ನಗರದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಹೊಸ ಕೃಷಿ ನೀತಿಗಳ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಕಾರ್ಪೋರೇಟ್ ಏಜಂಟರುಗಳ ಕೈಗೊಂಬೆಯಾಗಿ ನರ್ತಿಸುತ್ತಿರುವ ಬಿಜೆಪಿ ಸರಕಾರ ಜನ ವಿರೋಧಿ ಕಾಯ್ದೆಗಳನ್ನು ಯಾವೂದೇ ಚರ್ಚೆಯಿಲ್ಲದೆ ಒಂದರಮೇಲೊಂದರಂತೆ ಅಂಗೀಕಾರಗೊಳಿಸುತ್ತಿದೆ. ಹೊಸ ಕೃಷಿ ನೀತಿಗಳು ದಲ್ಲಾಳಿಗಳ ಹಿತಾಸಕ್ತಿ ಕಾಪಾಡುವಂತಿವೆ. ಇದು ಅನ್ನದಾತರ ಉರುಳಿಗೆ ಕಾರಣವಾಗಲಿದ್ದು, ಸರ್ಕಾರ ರೈತರ ಸಮಾದಿ ಕಟ್ಟಲು ಆರ್‌ಕೆಎಸ್ ಬಿಡುವುದಿಲ್ಲ. ಹೊಸ ಮಸೂಧೆಗಳ ವಿರುದ್ಧ ರಾಜ್ಯದಲ್ಲಿ ರೈತರ ಪ್ರತಿಭಟನೆಗಳು ಭುಗಿಲೆದ್ದರೂ ಭಂಡ ಬಿಜೆಪಿ ಸರಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಹರಿಹಾಯ್ದರು.
ಹೊಸ ಕೃಷಿ ನೀತಿಗಳ ಪ್ರತಿಕೃತಿಗೆ ಬೆಂಕಿಯಿಟ್ಟು ಮಾತನಾಡಿದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಆಡಳಿತ ನಡೆಸಿದ ಸರಕಾರಗಳು ಖಾಸಗೀಕರಣ ನೀತಿಗಳು ಜಾರಿಗೆ ತಂದಾಗಿನಿಂದ ದೇಶದ ಬೆನ್ನುಲುಬು ಕೊಳೆಯಲು ಶುರುವಾಗಿದೆ. ರೈತರ ಹೆಸರಿನ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಯಡಿಯೂರಪ್ಪ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರ ಸಮಾದಿ ಕಟ್ಟುತ್ತಿದ್ದಾರೆ. ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು ಅಧಿಕಾರಕ್ಕೇರಿದರೆ ಆತ ರೈತಪರ ರಾಜಕಾರಣಿಯಾಗುವುದಿಲ್ಲ. ರೈತರೊಂದಿಗೆ, ಹೋರಾಟಗಾರರೊಂದಿಗೆ ಹಾಗೂ ಕೃಷಿ ತಜ್ಞರೊಂದಿಗೆ ಚರ್ಚಿಸಿ ಒಮ್ಮತದ ತೀರ್ಮಾನಕೈಗೊಂಡು ಮಸೂಧೆಗಳು ಅಂಗೀಕಾರಗೊಳ್ಳಬೇಕು. ಅದೆಲ್ಲವನ್ನೂ ಗಾಳಿಗೆ ತೂರಿರುವ ಬಿಜೆಪಿ ಸರಕಾರ ಬಂಡವಾಳಶಾಹಿಗಳ ಪರವಾದ ಕಾಯ್ದೆಗಳನ್ನು ಪ್ರತಿರೋಧದ ಮಧ್ಯೆಯೂ ಜಾರಿಗೆ ತಂದು ರೈತರಿಗೆ ದ್ರೋಹ ಎಸಗಿದೆ ಎಂದು ದೂರಿದ ವೀರಭದ್ರಪ್ಪ, ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಲ್ಲಿನಾಥ ಹುಂಡೇಕಲ್, ಮಲ್ಲಿಕಾರ್ಜುನ ಗಂದಿ, ಗೌತಮ ಪರತೂರಕರ, ಶರಣು ಹೇರೂರ, ವೆಂಕಟೇಶ ದೇವದುರ್ಗಾ, ಯೇಸಪ್ಪ ಕೇದಾರ, ಶರಣುಕುಮಾರ ದೋಶೆಟ್ಟಿ, ರಾಜು ಒಡೆಯರಾಜ, ಶಿವುಕುಮಾರ ಆಂದೋಲಾ, ಶ್ರೀಶೈಲ ಕಡಬೂರ, ಗೋವಿಂದ ಯಳವಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.