ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸು ನನಸಾಗಿವೆಯೇ?

0
414

ಈ ದೇಶದಲ್ಲಿ ಜಯಂತಿ ಆಚರಣೆಗಳ ಆರ್ಭಟ ಇಂದು ನಿನ್ನೆಯದ್ದಲ್ಲ. ಅನುಗಾಲದಿಂದಲೂ ನಾವು ಜಯಂತಿಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಸಕಲ ಜೀವಕೋಟಿಯ ಒಳಿತಿಗಾಗಿ ದುಡಿದ ವ್ಯಕ್ತಿಗಳ ಸಾಧನೆಯನ್ನು ಗುರುತಿಸುವುದು, ಗೌರವಿಸುವುದು ಒಳ್ಳೆಯ ಕೆಲಸವೇನೋ ಸೈ! ಆದರೆ ಬಹಳಷ್ಟು ವೇಳೆ ಈ ರೀತಿ ಗುರುತಿಸಿ ಗೌರವಿಸುವ ಕೆಲಸ ಆ ವ್ಯಕ್ತಿ ಬದುಕ್ಕಿದ್ದಾಗ ಆಗುವುದಕ್ಕಿಂತ ಸತ್ತ ಮೇಲೆಯೇ ನಡೆಯುವ ಸಾಧ್ಯತೆಗಳೇ ಹೆಚ್ಚು. ಇಂದು ಜಯಂತಿಗಳ ಆಚರಣೆ ನಿಜವಾದ ಅರ್ಥದಲ್ಲಿ ಆಗುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ನಿಜ ಸಾಧನೆಯನ್ನು ಕಡೆಗಣಿಸಿ ಕಾರಣಿಕ ಪುರುಷನನ್ನಾಗಿಯೋ, ದೈವಿಶಕ್ತಿಯ ಹಿನ್ನೆಲೆಯಲ್ಲಿ ನೋಡುವುದರ ಮೂಲಕವೋ ವೈಭವೀಕರಿಸಿ, ಹಾಡಿ-ಹೊಗಳಿ ಕೈ ತೊಳೆದುಕೊಂಡು ಬಿಡುತ್ತೇವೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ,ಲೇಖಕ ಶಿವರಂಜನ್ ಸತ್ಯಂಪೇಟೆಯವರನ್ನು “ಕಲ್ಬುರ್ಗಿ ಕಲ್ಪವೃಕ್ಷ”ದ ಸಂಪಾದಕ ಸುರೇಶ ಬಡಿಗೇರ ಅವರು ಮಾತನಾಡಿಸಿದರು.

Contact Your\'s Advertisement; 9902492681

ಕಲ್ಪವೃಕ್ಷ: ಅಣ್ಣ ಬಸವಣ್ಣ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಮೆರವಣಿಗೆ ಯಾವ ಸಂದೇಶ ಬೀರುತ್ತವೆ?

ಸತ್ಯಂಪೇಟೆ: ಇಡೀ ಜಗತ್ತಿಗೆ ಉನ್ನತ ವಿಚಾರಗಳನ್ನು ಬೋಧಿಸಿದ ಅಣ್ಣ ಬಸವಣ್ಣ ಹಾಗೂ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗಳು ಇತ್ತೀಚಿಗೆ ಕೇವಲ ಮೆರವಣಿಗೆಗೆ ಮಾತ್ರ ಸೀಮಿತ ಎನ್ನುವಂತಾಗಿವೆ. ಅವರು ಮಾಡುತ್ತಾರೆ ಎಂದು ಇವರು, ಇವರು ಮಾಡುತ್ತಾರೆ ಎಂದು ಅವರು ಎನ್ನುವಂತೆ ಜಿದ್ದಿಗೆ ಬಿದ್ದವರಂತೆ ಭಾವಚಿತ್ರಗಳ ಮೆರವಣಿಗೆ ಮಾಡುತ್ತಿದ್ದಾರೆ. ಇದು ಇನ್ನೊಬ್ಬರ ಕಣ್ಣಲ್ಲಿ ಒತ್ತುವಂತಾಗಿದೆ ವಿನಃ ನಿಜವಾದ ಅರ್ಥದಲ್ಲಿ ಮೆರವಣಿಗೆ, ಸಂಭ್ರಮ, ಸಂತಸಪಡುವ ಉತ್ತಮ ಸಂದೇಶ ಸಮಾಜಕ್ಕೆ ಮುಟ್ಟಿಸುವಲ್ಲಿ ವಿಫಲವಾಗಿವೆ ಎಂದು ಹೇಳಬಹುದು. ಮಾನವ ಕುಲಕೋಟಿ ಅಷ್ಟೇ ಏಕೆ ಇಡೀ ಜೀವ ಸಂಕುಲವೇ ಬದುಕಲೆಂದು ತಮ್ಮ ಇಡೀ ಬದುಕನ್ನೇ ಸಮಾಜಕ್ಕಾಗಿ ಮುಡುಪಾಗಿಟ್ಟ ಈ ಮಹನೀಯರ ಜಯಂತಿ ಆಚರಣೆ ಕೇವಲ ಮೆರವಣಿಗೆಗಳಿಗೆ ಮಾತ್ರ ಸೀಮಿತವಾಗಿ ಅಬ್ಬರದ ಮೆರವಣಿಗೆಯಲ್ಲಿ ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಕಳೆದು ಹೋಗುತ್ತಿದ್ದಾರೆ. ಅವರುಗಳು ಹೇಳಿಕೊಟ್ಟ ವಿಚಾರಗಳು, ಅವರ ಬದುಕಿನ ಸಂದೇಶಗಳು ಸಮಾಜದಲ್ಲಿ ಹರಡುವಂತಾಗಲು ನಾವೆಲ್ಲರೂ ಅಹರ್ನಿಷಿ ಶ್ರಮಿಸಬೇಕಾಗಿದೆ. ಅವರ ಭಾವಚಿತ್ರಗಳ ಮೆರವಣಿಗೆಗಿಂತ ಅವರ ವಿಚಾರಗಳ ಮೆರವಣಿಗೆ ಅಗತ್ಯವಾಗಿದೆ. ಅಂದಾಗ ಮಾತ್ರ ಈ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಬರಲು ಸಾಧ್ಯ.

ಕಲ್ಪವೃಕ್ಷ: ವೀರಶೈವ ಮತ್ತು ಲಿಂಗಾಯತ ಧರ್ಮಕ್ಕಿರುವ ವ್ಯತ್ಯಾಸಗಳೇನು?

ಸತ್ಯಂಪೇಟೆ: ವೀರಶೈವವೇ ಬೇರೆ. ಲಿಂಗಾಯತವೇ ಬೇರೆ. ಅವರ ಆಚಾರ-ವಿಚಾರಗಳೇ ಬೇರೆ. ಇವರ ಆಚಾರ-ವಿಚಾರಗಳೇ ಬೇರೆ. ವೀರಶೈವ ಎನ್ನುವುದು ಕೇವಲ ಮತ. ಲಿಂಗಾಯತ ಎನ್ನುವುದು ಧರ್ಮ. ವೀರಶೈವರ ಆಚರಣೆಗಳು ಹಿಂದೂಗಳ ಆಚರಣೆಗಳನ್ನು ಹೋಲುತ್ತವೆ. ಆದರೆ ಲಿಂಗಾಯತರು ಹಿಂದುಗಳಲ್ಲ. ಹೀಗಾಗಿಯೇ ವಚನೋಕ್ತವಾಗಿರುವುದು ಲಿಂಗಾಯತ ಮತ್ತು ಆಗಮೋಕ್ತವಾಗಿರುವುದು ವೀರಶೈವ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಅನೇಕ ಚರ್ಚೆ, ಸಂವಾದ, ಸಂಶೋಧನೆಗಳಾಗಿ ವೀರಶೈವವೇ ಬೇರೆ, ಲಿಂಗಾಯತವೇ ಬೇರೆ ಎಂದು ವರ್ಗೀಕರಿಸಲಾಗಿದೆ.

ಕಲ್ಪವೃಕ್ಷ: ಇಷ್ಟಲಿಂಗವೆಂದರೇನು? ಇಷ್ಟಲಿಂಗಪೂಜೆಯಿಂದ ಮಾನಸಿಕ ನೆಮ್ಮದಿ ಸಾಧ್ಯವೆ?

ಸತ್ಯಂಪೇಟೆ: ಗುಡಿ-ಗುಂಡಾಗಳ ಹೆಸರಿನಲ್ಲಿ ಜನರ ಮೇಲಾಗುತ್ತಿದ್ದ ಶೋಷಣೆಯನ್ನು ಗಮನಿಸಿದ ಬಸವಣ್ಣನವರು ಸಮಾಜದಲ್ಲಿ ಸಮಾನತೆ ತರುವುದಕ್ಕಾಗಿ ಇಷ್ಟಲಿಂಗ ಎಂಬ ಸಾಧನವನ್ನು ಶೋಧಿಸಿದ. ಇದು ಬೇರೆಏನೂ ಅಲ್ಲ. ನಮ್ಮೊಳಗಿನ ಅರಿನಿನ ಕುರುಹು ಮಾತ್ರ. ಹೆಸರೆ ಸೂಚಿಸುವಂತೆ ಇದು ನಾವು ಬಯಸಿದ್ದನ್ನು ಕರುಣಿಸುವ ಒಂದು ಸಾಧನ. ಈ ಸಾಧನೆಯಿಂದ ಮಾನಸಿಕ ನೆಮ್ಮದಿ ಶತಸಿದ್ಧ. ಅಂತೆಯೇ ಬಸವಾದಿ ಶರಣರು ಇಡೀ ಜಗತ್ತಿಗೆ ವಿಶಿಷ್ಟವಾದ ವಚನ ಸಾಹಿತ್ಯದ ಕೊಡುಗೆ ನೀಡಲು ಸಾಧ್ಯವಾಯಿತು.

ಮನಸ್ಸಿನ ಹೊಯ್ದಾಟ, ತೊಳಲಾಟವನ್ನು ಇಷ್ಟಲಿಂಗದ ಎದುರು ಅನಿಮಿಷ ದೃಷ್ಟಿಯಿಂದ, ತದೇಕ ಚಿತ್ತದಿಂದ ಧ್ಯಾನಿಸಿದ್ದೇ ಆದಲ್ಲಿ ಒಂದು ಅಭೂತಪೂರ್ವ, ಅವರ್ಣನೀಯ ಅನುಭವ ಆಗಬಲ್ಲದು ಎಂದು ಸಾಧಕರ ಅಂಬೋಣ. ಇದರ ರಚನೆ ಕೂಡ ಅತ್ಯಂತ ವೈಜ್ಞಾನಿಕವಾಗಿದೆ. ಅಂತೆಯೇ ಇದನ್ನು ಮಾನಸಿಕ ನೆಮ್ಮದಿ ದೊರೆಯುವ ತಂಗುದಾಣ ಎಂದು ಕರೆಯಬಹುದು.

ಕಲ್ಪವೃಕ್ಷ: ಬಸವಣ್ಣನವರ ವಚನಗಳ ಸಾರ ಭಾರತೀಯ ಸಂವಿಧಾನದಂತೆ ಕಂಡು ಬರುತ್ತವೆಯೇ?

ಸತ್ಯಂಪೇಟೆ: ನೀವು ಕೇಳುವ ಪ್ರಶ್ನೆ ಇದಲ್ಲ. ಬಾರತೀಯ ಸಂವಿಧಾನದಲ್ಲಿ ಬಸವಣ್ಣವರ ವಚನಗಳ ಸಾರ ಅಡಕವಾಗಿವೆಯೇ? ಎಂದು ಕೇಳಬೇಕಿತ್ತು. ಆದ್ರೂ ಎರಡೂ ಒಂದೇ! ಬಸವಾದಿ ಶರಣರು ಆಗಿ ಹೋಗಿದ್ದು ೧೨ನೇ ಶತಮಾನದಲ್ಲಿ, ಭಾರತದ ಸಂವಿಧಾನ ರಚನೆಯಾಗಿರುವುದು ಸ್ವಾತಂತ್ರ್ಯ ನಂತರ. ಶರಣರ ವಚನಗಳಲ್ಲಿನ ಎಲ್ಲ ಅಂಶಗಳೂ ಭಾರತದ ಸಂವಿಧಾನದಲ್ಲಿ ಅಡಕವಾಗಿರುವುದನ್ನು ಕಾಣಬಹುದು.

ಕಳಬೇಡ, ಕೊಲಬೇಡ

ಹುಸಿಯ ನುಡಿಯಲು ಬೇಡ

ಇದಿರು ಹಳಿಯಲು ಬೇಡ

ತನ್ನ ಬಣ್ಣಿಸ ಬೇಡ, ಮುನಿಯ ಬಧೇಡ

ಅನ್ಯರಿಗೆ ಅಸಹ್ಯ ಪಡಬೇಡ

ಇದೇ ಅಂತರಂಗ ಶುದ್ಧಿ ಇದೇ ಬಹಿರಂಗಶುದ್ಧಿ

ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ

ಬಸವಣ್ಣನವರ ಈ ವಚನದಲ್ಲಿ ನಮ್ಮ ಸಂವಿಧಾನದ ಆಶಯವನ್ನೇ ಕಾಣಬಹುದು. ಸಪ್ತಸೂತ್ರಗಳಂತಿರುವ ಈ ವಚನವನ್ನು ಪಚನ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡದ್ದೇ ಆದಲ್ಲಿ ನಮಗೆ ಸಂವಿಧಾನವೇ ಬೇಕಿಲ್ಲ ಎಂದೆನಿಸುತ್ತದೆ. ಹೀಗಾಗಿ ಅಂಬೇಡ್ಕರ್ ಅವರು ಭಾರತಕ್ಕೆ ಲಿಖಿತ ಸಂವಿಧಾನ ಒದಗಿಸಿದರೆ, ಬಸವಣ್ಣನವರು ಇಡೀ ಜಗತ್ತಿಗೆ ಅಲಿಖಿತ ಸಂವಿಧಾನ ಒದಗಿಸಿದರು ಎಂದು ಹೇಳಬಹುದು.

ಕಲ್ಪವೃಕ್ಷ: ಜಗದ್ಗುರುಗಳು ಎನಿಸಿಕೊಂಡವರು ಆಚರಿಸುತ್ತಿರುವ ಅಂಧ ಧರ್ಮಾಚರಣೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಸತ್ಯಂಪೇಟೆ: ನಿಮ್ಮ ಜಗದ್ಗುರು ಎಂಬ ಪದ ಪ್ರಯೋಗದಲ್ಲಿ ನನ್ನದೊಂದು ಸಣ್ಣ ತಕರಾರು ಇದೆ. ಯಾಕೆಂದರೆ ಎಲ್ಲವನ್ನು ಒಳಗೊಂಡದ್ದು ಜಗತ್ತು. ಈ ಜಗತ್ತು ಒಂದೇ ಇದೆ. ಆದರೆ ಈ ಜಗತ್ತಿಗೆ ಅದ್ಹೇಗೆ ಐದೈದು ಜನ ಜಗದ್ಗುರುಗಳು ಇರಲು ಸಾಧ್ಯ. ಮೇಲಾಗಿ ಇಲ್ಲಿ ಎಲ್ಲ ಜಾತಿ, ಜನಾಂಗ, ವಿವಿಧ ಧರ್ಮದವರು ಇದ್ದಾರೆ. ಅವರಿಗೂ ಇವರೇ ಜಗದ್ಗುರುಗಳೇ? ಇದು ಹೇಗೆ ಸಾಧ್ಯ. ನೀವೇ ಯೋಚಿಸಿ. ಇನ್ನು ಅವರು ಆಚರಿಸಿಕೊಂಡು ಬರುತ್ತಿರುವ ಅಂಧಾಚರಣೆಗಳ ಬಗ್ಗೆ ಹೇಳಲು ಪದಗಳೇ ಸಾಲುವುದಿಲ್ಲ. ಹೀಗಾಗಿ ಅವರ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಇಷ್ಟು ಮಾತ್ರ ನಿಜ. ಯಾವುದೇ ಧರ್ಮಾಚರಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಇರಬಾರದು ಎಂಬುದು ನನ್ನ ಅಭಿಪ್ರಾಯ.

ಕಲ್ಪವೃಕ್ಷ: ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸು ನನಸಾಗಿವೆಯೇ?

ಸತ್ಯಂಪೇಟೆ: ಜಗತ್ತಿಗೆ ಶಾಂತಿ, ಕರುಣೆ ನೀಡಿದ ಬುದ್ಧ, ಸಕಲ ಜೀವಾತ್ಮರಿಗೆ ಲೇಸು ಬಯಸಿದ ಬಸವಣ್ಣ, ಭಾರತದ ಸಂವಿಧಾನ ರಚಿಸುವ ಮೂಲಕ ಮಾನವ ಘನತೆ ಎತ್ತಿ ಹಿಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ, ವರ್ಣ, ವರ್ಗ ರಹಿತ ಸಮ ಸಮಾಜದ ಕನಸು ಕಂಡಿದ್ದರು. ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಸಮಾಜದ ಎಲ್ಲರೂ ವಿಫಲರಾಗಿದ್ದೇವೆ. ಅವರವರ ವಾರಸುದಾರಿಕೆಯನ್ನು ಪಡೆದ ನಾವುಗಳು ಅವರ ವಿಚಾರಗಳಿಗೆ ತದ್ವಿರುದ್ಧವಾಗಿ ಬದುಕುತ್ತಿದ್ದೇವೆ. ಅವರ ಆಶಯಗಳನ್ನು ಈಡೇರಿಸುವತ್ತ ಸ್ವಲ್ಪವೂ ಗಮನಹರಿಸದ ನಾವುಗಳು ರಾಜಕೀಯ ಮುಖಂಡರ ದಾಳಗಳಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳು ಇಂದು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿವೆ. ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸುಗಳು ನನಸಾಗಲು ಸಾಧ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here