ಕಲಬುರಗಿ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಲಾಗಿದೆ. ಅಬಕಾರಿ ಅಧಿಕಾರಿಗಳು ಕಲಬುರಗಿ ನಗರದಲ್ಲಿ ಇತ್ತೀಚೆಗೆ ವಿವಿಧೆಡೆ ಅಬಕಾರಿ ದಾಳಿ ನಡೆಸಿ ಮದ್ಯ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿಪಡಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಕಲಬುರಗಿ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ನಗರದ ಗಂಜ್ ಪ್ರದೇಶದಿಂದ ಹುಮನಾಬಾದ್ ರಿಂಗ್ ರಸ್ತೆಗೆ ಹೋಗುವ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಟಿ.ವಿ.ಎಸ್. ಜ್ಯೂಪಿಟರ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 8.640 ಲೀಟರ್ ಮದ್ಯ ಹಾಗೂ 7.800 ಲೀಟರ್ ಬಿಯರ್ ಸಾಗಾಣಿಕೆ ಮಾಡುತ್ತಿರುವವರನ್ನು ಪತ್ತೆ ಮಾಡಿ ವಾಹನ ಹಾಗೂ ಅಕ್ರಮ ಮದ್ಯವನ್ನು ಕಲಬುರಗಿ ವಲಯ ನಂ. 1ರ ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದುಕಣ್ಣ ಅವರು ಜಪ್ತಿಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕಲಬುರಗಿಯ ವಿದ್ಯಾನಗರದಿಂದ ಬ್ರಹ್ಮಪೂರ ವಡ್ಡರಗಲ್ಲಿ ಹೋಗುವ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಟಿವಿಎಸ್ ಸ್ಕೂಟಿ ಪೆಪ್ ದ್ವಿಚಕ್ರ ವಾಹನದಲ್ಲಿ 8.640 ಲೀಟರ್ ಸ್ವದೇಶಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವವರನ್ನು ಪತ್ತೆ ಮಾಡಿ ವಾಹನ ಹಾಗೂ ಅಕ್ರಮ ಮದ್ಯವನ್ನು ಕಲಬುರಗಿ ವಲಯ ನಂ. 2ರ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಅವರು ಜಪ್ತಿಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಕಲಬುರಗಿ ನಗರದ ಎಸ್.ಬಿ. ಕಾಲೇಜು ಹತ್ತಿರದಲ್ಲಿ ಅಬಕಾರಿ ದಾಳಿ ನಡೆಸಿ, ವಾಹನಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಹಿರೋ ಹೊಂಡಾ ಸಿಡಿ-100 ದ್ವಿಚಕ್ರ ವಾಹನದಲ್ಲಿ 8.640 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವವರನ್ನು ಪತ್ತೆ ಮಾಡಿ ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ವಿಠ್ಠಲರಾವ ಎಂ. ವಾಲಿ ಅವರು ಮದ್ಯವನ್ನು ಜಪ್ತಿಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಈ ಮೇಲ್ಕಂಡ ಮೂರು ಪ್ರಕರಣಗಳಲ್ಲಿ ಜಪ್ತಿಪಡಿಸಿದ ಒಟ್ಟು ಮುದ್ದೇಮಾಲಿನ ಮೌಲ್ಯ 1 ಲಕ್ಷ ರೂ. ಇರುತ್ತದೆ. ಈ ದಾಳಿ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷಕ ರೇವಣಸಿದ್ದಪ್ಪ ಹೂಗಾರ, ಬಸವರಾಜ ಉಳ್ಳೆಸೂಗೂರು, ಸಂತೋಷ ಬಿರಾದಾರ ಹಾಗೂ ಸಿಬ್ಬಂದಿಗಳಾದ ರಾಜೇಂದ್ರ, ಅರವಿಂದ, ವಸಂತಕುಮಾರ, ಸಿದ್ದಮಲ್ಲಪ್ಪ, ರಾಜೇಂದ್ರನಾಥ, ಆಸೀಫ್ ಎಕ್ಬಾಲ್, ಬಸವರಾಜ ಮಾಲಗತ್ತಿ, ರವಿಕುಮಾರ, ಕಾಶೀನಾಥ ಹಾಗೂ ಮಹ್ಮದ್ ಸಲೀಮುದ್ದೀನ್ ಪಾಲ್ಗೊಂಡಿದ್ದರು.
ಕಲಬುರಗಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ ಹಾಗೂ ಅಬಕಾರಿ ಉಪ ಆಯುಕ್ತರಾದ ಶಶಿಕಲಾ ಎಸ್. ಒಡೆಯರ್ ಅವರ ಆದೇಶ ಹಾಗೂ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಈ ಅಬಕಾರಿ ದಾಳಿಯನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಸನ್ನದದಾರರೊಂದಿಗೆ ಸಭೆ ನಡೆಸಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಬಾರದೆಂದು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.