ಕಲಬುರಗಿ: ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಸಭಾಂಗಣದಲ್ಲಿ ಸೋಮವಾರ ಗೃಹರಕ್ಷಕ ದಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಿಮಿ ಮರಿಯಮ್ ಜಾರ್ಜ್ ಮಾತನಾಡಿ, ಶಿಸ್ತಿಗೆ ಹೆಸರಾದ ಗೃಹರಕ್ಷಕ ದಳದ ನಿಷ್ಕಾಮ ಸೇವೆಯನ್ನು ಸ್ಮರಿಸಿ, ಭೀಮಾ ನದಿಯ ಪ್ರವಾಹ ಸಂದರ್ಭದಲ್ಲಿ ಜನರ ಜೀವ ಹಾಗೂ ಆಸ್ತಿ ರಕ್ಷಣೆ ಮಾಡಿ ಉತ್ತಮವಾಗಿ ಪ್ರವಾಹ ಕರ್ತವ್ಯ ನಿರ್ವಹಿಸಿದ ಗೃಹ ರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕ್ಕೆ ಗೃಹ ರಕ್ಷಕರನ್ನು ನಿಯೋಜಿಸಬೇಕೆಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು.
ಕಲಬುರಗಿ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಸಂತೋಷ ಕುಮಾರ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪ ಸಮಾದೇಷ್ಟರಾದ ಮಲ್ಲಪ್ಪ ಹಾಗೂ ಕಚೇರಿಯ ಸಿಬ್ಬಂದಿಗಳು, ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಹಾಗು ಗೃಹ ರಕ್ಷಕರು ಉಪಸ್ಥಿತರಿದ್ದರು.