ಕಲಬುರಗಿ: ಅವಿರೋಧವಾಗಿ ಆಯ್ಕೆಯಾಗುವ ಗ್ರಾಮ ಪಂಚಾಯತಿಗಳಿಗೆ ಕೆಕೆಆರ್ ಡಿಬಿ ಯಿಂದ ಒಂದು ಕೋಟಿ ವಿಶೇಷ ಅನುದಾನ ನೀಡಲಾಗುವುದು ಎಂದು ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ್ ರೇವೂರು ಅವರು ಘೋಷಣೆ ಮಾಡಿರುವ ಹೇಳಿಕೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆ ಎಂದು ಕೆಪಿಸಿಸಿ ವಕ್ತಾರರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್ ಕೆಕೆಆರ್.ಡಿಬಿ ಅಧ್ಯಕ್ಷರ ವಿರುದ್ಧ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕೂಡಲೇ ಅಗತ್ಯ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಆಧೀನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಶಾಸಕ ಖರ್ಗೆ ಈ ಸಂದರ್ಭದಲ್ಲಿ ತಿಳಿಸಿದರು.
ಪಂಚಾಯತಿಗೆ ವಿಶೇ಼ಷ ಅನುದಾನ ನೀಡುವುದಾಗಿ ಹೇಳಿರುವ ಕೆಕೆಆರ್.ಡಿ.ಬಿ ಅಧ್ಯಕ್ಷರ ಈ ಘೋಷಣೆಯಿಂದ ಅಭ್ಯರ್ಥಿಗಳಿಗೆ ಆಮಿಷ ಒಡ್ಡುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ಸಲುವಾಗಿ ಚುನಾವಣಾ ಆಯೋಗ ಜಾರಿಗೆ ತಂದ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಕುರಿತು ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಕ್ರಮ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸಮಧಾನ ವ್ಯಕ್ತಪಡಿಸಿ ಸೂಕ್ತ ತನಿಖೆ ಕ್ರಮವಹಿಸಲು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಗದೇವ್ ಗುತ್ತೇದ್ದಾರ, ಸುಭಾಷ್ ರಾಠೋಡ್, ಲತಾರವಿ ರಾಠೋಡ್, ಈರಣ್ಣ ಝಳಕಿ ಸೇರಿದಂತೆ ಇತರರು ಇದ್ದರು.