ಕಲಬುರಗಿ: ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಕಳೆದ ಐದು ದಶಕಗಳಿಂದ ರಾಜಕೀಯ ಅಧಿಕಾರದಲ್ಲಿದ್ದು, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಗೆದ್ದು ಈಗ ಪುನಃಹ ಗ್ರಾಮ ಪಂಚಾಯತಿ ಸದಸ್ಯರಾಗಲು ನಾಮಪತ್ರ ಸಲ್ಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಅಣ್ಣಾರಾವಗೌಡ ಪಾಟೀಲ ಅವರು ಇಂಗಳಗಿ ಗ್ರಾಮದ ಮಂಡಲ ಪಂಚಾಯತಿ ಸದಸ್ಯರಾಗಿ, ಮಂಡಲ ಪಂಚಾಯತಿ ಪ್ರಧಾನರಾಗಿ, ಗ್ರಾಪಂ ಸದಸ್ಯರಾಗಿ, ಗ್ರಾಪಂ ಉಪಾಧ್ಯಕ್ಷರಾಗಿ, ತದನಂತರ ಭಂಕೂರ ಜಿಲ್ಲಾ ಪಂಚಾಯತಿ ಸದಸ್ಯರಾದ ಬಳಿಕ ಇಂಗಳಗಿ ತಾಪಂಗೆ ಆಯ್ಕೆಯಾದವರು. ಈಗ ಮತ್ತೆ ಗ್ರಾಪಂ ಚುನಾವಣೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಜಿಪಂ ಸದಸ್ಯರಾಗಿ ಅಧಿಕಾರ ನಡೆಸಿದ ಹಿರಿಯ ರಾಜಕಾರಣಿಯೊಬ್ಬರು ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವುದು ರಾಜಕೀಯ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿ ಗಮನ ಸೆಳೆಯುತ್ತಿದೆ.
ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಕುಂದನೂರು ಗ್ರಾಮ ಸೇರಿದಂತೆ ಒಟ್ಟು ೨೦ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು ೭೮ ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅಣ್ಣಾರಾವಗೌಡ ಪಾಟೀಲ ಅವರು ವಾರ್ಡ್-೩ ರಿಂದ ಆಯ್ಕೆ ಬಯಸಿ ಕಣಕ್ಕಿಳಿದಿದ್ದು, ರಾಜಕೀಯವಾಗಿ ಎತ್ತರಕ್ಕೇರಿದ ನಾಯಕರೊಬ್ಬರು ದಿಢೀರ್ ಗ್ರಾಪಂ ರಾಜಕಾರಣಕ್ಕೆ ಪ್ರವೇಶ ಪಡೆದಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಗ್ರಾಮದಲ್ಲಿ ಉತ್ಸಾಹಿ ಯುವಕರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರ ಸಂಖ್ಯೆ ದೊಡ್ಡದಿದೆ. ಕಿರಿಯರನ್ನು ರಾಜಕೀಯವಾಗಿ ಬೆಳೆಸಬೇಕಾದ ಅಣ್ಣಾರಾವಗೌಡ ಪಾಟೀಲರು ಪುನಃಹ ಗ್ರಾಪಂಗೆ ಆಯ್ಕೆ ಬಯಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರೂ ಕೂಡ ಹೈಕಮಾಂಡ್ ಮುಂದೆ ಅತೃಪ್ತಿ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವಿವಿಧ ವಾರ್ಡ್‌ಗಳಲ್ಲಿ ಹೊಸ ಮುಖಗಳ ಜತೆಗೆ ಹಳೆಯ ಮುಖಗಳು ಪುನರ್ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಕಣ ಮತ್ತಷ್ಟು ರಂಗೇರಲು ಕಾರಣವಾಗಿದೆ.
ಗ್ರಾಪಂ ಚುನಾವಣಾ ಕೋರ್ ಕಮೀಟಿಯಲ್ಲಿ ಹಿರಿಯರಾದ ಅಣ್ಣಾರಾವಗೌಡ ಪಾಟೀಲ ಅವರ ಹೆಸರು ಪ್ರಾಸ್ತಾಪವಾಗಿತ್ತು. ಹಲವು ವರ್ಷಗಳ ಕಾಲ ರಾಜಕೀಯ ಅಧಿಕಾರ ಅನುಭವಿಸುವ ಮೂಲಕ ಜನರ ಸೇವೆ ಮಾಡಿದ್ದಾರೆ. ಈಗ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು. ಅವರು ಗ್ರಾಪಂಗೆ ಸ್ಪರ್ಧಿಸಿರುವುದು ಕೇಳಿ ನನಗೂ ಅಶ್ಚರ್ಯವಾಗಿದೆ. ಗ್ರಾಮಸ್ಥರ ಒತ್ತಡದ ಮೇರೆಗೆ ಸ್ಪರ್ಧೆ ಮಾಡಿರಬಹುದು. -ಸೈಯ್ಯದ್ ಮಹೆಮೂದ್ ಸಾಹೇಬ. ಅಧ್ಯಕ್ಷರು, ವಾಡಿ ಬ್ಲಾಕ್ ಕಾಂಗ್ರೆಸ್.