ಕಲಬುರಗಿ: 2014 ರಲ್ಲಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದ ಬಿಜೆಪಿ ಈಗ ರೈತರ ಬದುಕನ್ನೇ ಮಣ್ಣುಪಾಲು ಮಾಡಿದೆ ಎಂದು ಮಾಜಿ ಸಚಿವರಾದ, ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ರೈತರ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಹೇಗೆ ರೈತರ ಬದುಕಿಗೆ ಮುಳ್ಳಾಗಿದೆ ಎಂದು ಸರಣಿ ಟ್ವಿಟ್ ಮಾಡುವ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿರೋಧಪಕ್ಷಗಳು ಈ ಹಿಂದೆ ಮಾಡಿದ ಸಾಲ ಮನ್ನಾ ಹಾಗೂ ಇತರೆ ಹಣ ರೈತರಿಗೆ ತಲುಪುತ್ತಿರಲಿಲ್ಲ ಎಂದು ಬಿಜೆಪಿ ವಾದಿಸಿತ್ತು. ಆದರೆ, ವಾಸ್ತವದಲ್ಲಿ ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರ ಸಾಲಮನ್ನಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ಅವದ ಸಹೋದರನೂ ಕೂಡಾ ಇದರ ಫಲಾಭನುಭವಿ ಎಂದಿದ್ದಾರೆ.
ಎಂಎಸ್ ಪಿ ಹೆಚ್ಚಿಸಿ ಬೆಳೆ ಖರೀದಿ ಪ್ರಮಾಣವೂ ಹೆಚ್ಚಿಸಿದ್ದರಿಂದ ರೈತರ ಆದಾಯ ದುಪ್ಪಟ್ಟಾಗಿದೆ ಎಂದು ಬಿಜೆಪಿ ವಾದವಾಗಿದೆ. ಆದರೆ, ತಜ್ಞರ ಪ್ರಕಾರ, ಕೃಷಿ ವಲಯ ಕೇವಲ ಶೇ 0.3 ರಷ್ಟು ಮಾತ್ರ ಬೆಳವಣಿಗೆ ಕಂಡಿದ್ದು, ಇದು ಕಳೆದ 20 ವರ್ಷದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಇದಾಗಿದೆ. ಹಾಗೂ ಗ್ರಾಮೀಣ ಪ್ರದೇಶದ ವೇತನ 3.8% ಕ್ಕೆ ಕುಸಿದಿದೆ ಎಂದು ಶಾಸಕರು ವಿವರಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಹೆಚ್ಚಿನ ಆಹಾರ ಧಾನ್ಯ ಖರೀಸುತ್ತಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ,2015 ರಲ್ಲಿ ಮೋದಿ ಸರಕಾರ ಎಂ ಎಸ್ ಪಿ ಅಡಿಯಲ್ಲಿ ಏಕದಳ ಮತ್ತು ದ್ವಿದಳ ದಾನ್ಯಗಳ ಖರೀದಿ ಪ್ರಮಾಣ ಹೆಚ್ಚಳ ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ಮುಂದೆ ಹೇಳಿದೆ. ಈ ಸಾಲಿನ ಮುಂಗಾರು ಬೆಳೆಗೆ ಕೇಂದ್ರ ಸರಕಾರದ ಎಂ ಎಸ್ ಪಿ ಇತರೆ ರಾಜ್ಯಗಳಿಗಿಂತ ಕಡಿಮೆಇದೆ.
ನೈಸರ್ಗಿಕ ವಿಕೋಪಗಳು ಎದುರಾದರೆ ರೈತರು ಪರಿಹಾರ ಪಡೆಯಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಆದರೆ, ಫಸಲ್ ಬಿಮಾ ಯೋಜನೆಯಡಿ ದುಬಾರಿ ಕಂತುಗಳನ್ನು ಕಟ್ಟುವಂತೆ ಒತ್ತಡ ಹಾಕಲಾಗಿದೆ. ಈ ಯೋಜನೆ ರೈತರ ಬದಲು ಕಂಪನಿಗಳಿಗೆ ಲಾಭದಾಯಕವಾಗಿದೆ. 2019 ರ ಮುಂಗಾರಿನಲ್ಲಿ ವಿಮಾಕಂಪನಿಗಳ ಕಂತು ಮತ್ತು ಕ್ಲೇಮು ನಡುವಿನ ಅನುಪಾತ ಶೇ 60 ಮತ್ತು ಶೇ 23 ರಷ್ಟಿತ್ತು.
ಹೊಸಕಾಯ್ದೆ ಮೂಲಕ ರೈತರು ತಮಗೆ ಇಚ್ಛೆಬಂದ ಕಡೆ ಬೆಳೆ ಮಾರಾಟ ಮಾಡಿ ಅತ್ತ್ಯುತ್ತಮ ಬೆಲೆ ಪಡೆಯಬಹುದು ಎಂದು ಬಿಜೆಪಿ ವಾದವಾಗಿದೆ. ಆದರೆ, ಖಾಸಗಿ ವ್ಯಾಪಾರಿಗಳು ರೈತರನ್ನು ಸುಲಿಗೆ ಮಾಡದಂತೆ ಮಂಡಿಗಳು ರಕ್ಷಣೆ ನೀಡುತ್ತಿದ್ದವು. ಆದರೆ, ನೂತನ ಕಾಯಿದೆಯಡಿಯಲ್ಲಿ ಮಂಡಿಗಳು ದುರ್ಬಲವಾಗಲಿದ್ದು, ರೈತರು ಖಾಸಗಿ ಕಂಪನಿಗಳ ದಯೆಯಲ್ಲಿ ಬದುಕುವಂತಾಗುತ್ತದೆ.
ಕೃಷಿ ಕಾಯ್ದೆಯನ್ನು ಸಂಸತ್ತಿನಲ್ಲಿ ಆತುರದಲ್ಲಿ ಅನುಮೋದನೆ ನೀಡಿಲ್ಲ. ದಶಕಗಳ ಕಾಲ ಇದರ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನುವುದು ಬಿಜೆಪಿ ವಾದ. ಆದರೆ, ವಾಸ್ತವದಲ್ಲಿ ಈ ಕಾಯ್ದೆ ಆತುರದಲ್ಲಿ ಅನುಮೋದನೆ ನೀಡಿಲ್ಲವಾದರೆ ಇದನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿಲ್ಲವೇ? ರಾಜ್ಯ ಸಭೆಯಲ್ಲಿ ಮತ ಎಣಿಕೆ ಮಾಡದೇ ಮಸೂದೆ ಅನುಮೋದನೆ ನೀಡಿದ್ದು ಯಾಕೆ ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರೈತರು ಈ ಹಿಂದೆಯೂ ಪ್ರತಿಭಟನೆ ಮಾಡುತ್ತಿದ್ದರು. ಆಗ ವಿರೋಧಪಕ್ಷಗಳು ಅವರನ್ನು ನಿರ್ಲಕ್ಷಿಸಿದ್ದರು. ರೈತರು ಈ ದೇಶದಹೆಮ್ಮೆ ವಿರೋಧಪಕ್ಷಗಳಯ ತಮ್ಮ ರಾಜಕೀಯ ಗುರಿಸಾಧನೆಗೆ ರೈತರನ್ನು ಬಳಸಿಕೊಳ್ಳುತ್ತಿವೆ ಎಂದು ಬಿಜೆಪಿ ವಾದ ಮಾಡಿದೆ. ಆದರೆ, ಮೋದಿ ಅಧಿಕಾರ ಅವಧಿಯಲ್ಲಿ ಕೃಷಿಕರ ಪ್ರತಿಭಟನೆ ಶೇ 700 ರಷ್ಟು ಹೆಚ್ಚಾಗಿದೆ ಎಂದು ಬಿಜೆಪಿ ನಿಜಬಣ್ಣ ಬಯಲು ಮಾಡಿದ್ದಾರೆ.
ಎಂಎಸ್ ಪಿ ಪ್ರಸ್ತುತ ಜಾರಿಯಲ್ಲಿರುವ ಮಾದರಿಯಲ್ಲಿಯೇ ಮುಂದುವರೆಯಲಿದೆ ಎಂದು ಬಿಜೆಪಿ ಖಾತರಿ ನೀಡುವುದಾಗಿ ಹೇಳಿದೆ. ಆದರೆ, ಹೊಸ ಕೃಷಿ ಕಾಯದೆಯಲ್ಲಿ ಎಂ ಎಸ್ ಪಿ ಪ್ರಸ್ತಾವವೇ ಇಲ್ಲ. ಎಪಿ ಎಂ ಸಿ ಹೊರಗೆ ಉತ್ಪನ್ನ ಖರೀದಿಗೆ ಅವಕಾಶ ಮಾಡಿಕೊಡುವ ಮೂಲಕ ಎಂಎಸ್ ಪಿ ನಾಶಕ್ಕೆ ಷಡ್ಯಂತ್ರ ಮಾಡಿದೆ. ಮಂಡಿಯಿಂದ ಹೊರಗೆ ಆಗುವ ವ್ಯಾಪಾರಕ್ಕೆ ಎಂ ಎಸ್ ಪಿ ಅನ್ವಯವಾಗುವುದಿಲ್ಲ.
ರೈತರು, ರೈತ ಸಂಘಟನೆಗಳು, ಕೃಷಿ ಆರ್ಥಿಕ ತಜ್ಞರು ಕೃಷಿ ವಿಜ್ಞಾನಿಗಳು ಕೃಷಿ ವಲಯದ ಅಭಿವೃದ್ದಿಗೆ ಆಗ್ರಹಿಸಿದ್ದಾರೆ ಎಂದು ಬಿಜೆಪಿ ವಾದ. ಆದರೆ, ಕೃಷಿ ತಜ್ಞರ ಪ್ರಕಾರ ಈ ಕಾಯ್ದೆ ಕೇವಲ ಒಕ್ಕೂಟ ವ್ಯವಸ್ಥೆ ಮೇಲೆ ಮಾತ್ರವಲ್ಲ ದೇಶದ ಸಣ್ಣ ಮತ್ತು ಶೋಷಿತ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಮಸೂದೆ ಹಿಂಪಡೆಯುವಂತೆ ಅವರು ಆಗ್ರಹಿಸುತ್ತಿದ್ದಾರೆ.
ನಾವು ಎಂ ಎಸ್ ಪಿ ತೆಗೆದು ಹಾಕುವುದಾದರೆ ಸ್ವಾಮಿನಾಥನ್ ವರದಿ ಯಾಕೆ ಜಾರಿಗೆ ತರುತ್ತಿದ್ದೆವು ಎಂದು ಬಿಜೆಪಿ ವಾದಿಸಿದೆ. ಆದರೆ, ವಾಸ್ತವದಲ್ಲಿ ಬಿಜೆಪಿಯು ಸ್ವಾಮಿನಾಥನ್ ವರದಿಯ ಪ್ರಮುಖ ಶಿಫಾರಸ್ಸಿನಂತೆ C2+50% ಸೂತ್ರದಲ್ಲಿ ಎಂ ಎಸ್ ಪಿ ನೀಡುತ್ತಿಲ್ಲ. ಸರಕಾರ ಈಗ ಜಮೀನು ಬಾಡಿಗೆ ಪ್ರಮಾಣ ಬಂಡವಾಳ ಮೊತ್ತದ ಬಡ್ಡಿ ಪ್ರಮಾಣವನ್ನು ಎಂ ಎಸ್ ಪಿ ಗೆ ಸೇರಿಸಿಲ್ಲ.
ತಮಿಳುನಾಡಿನ ರೈತರು ದೆಹಲಿಯ ಜಂತರ್ ಮಂತರ್ ನಲ್ಲಿ ನೂರಕ್ಕೂ ಹೆಚ್ಚು ದಿನ ಪ್ರತಿಭಟನೆ ಮಾಡಿದ್ದರು. ಬಿಜೆಪಿ ಮೈತ್ರಿ ಪಕ್ಷಗಳಾದ ಅಕಾಲಿದಳ, ಆರ್ ಎಲ್ ಡಿ ಮತ್ತು ಆರ್ ಎಸ್ ಎಸ್ ನ ಭಾರತೀಯ ಕಿಸಾನ್ ಸಂಘ ಕೂಡಾ ರೈತರ ಇಂದಿನ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಸರಕಾರ ನಿಜಕ್ಕೂ ರೈತರ ಪರವಾಗಿದ್ದರೆ ಈ ಹೋರಾಟದ ಬಗ್ಗೆ ಗಮನ ಹರಿಸಲಿಲ್ಲ ಯಾಕೆ ? ಎಂದು ಪ್ರಶ್ನಿಸಿದ್ದಾರೆ.
ರೈತರು ಯೂರಿಯಾ ಗೊಬ್ಬರ ಪಡೆಯಲು ಲಾಠಿಚಾರ್ಜ್ ಎದುರಿಸುವ ಪರಿಸ್ಥಿತಿ ಇತ್ತು ಎಂದು ಬಿಜೆಪಿ ಹೇಳಿದೆ. ವಾಸ್ತವದಲ್ಲಿ ಹೇಳುವುದಾದರೆ, 2017 ರಲ್ಲಿ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚವ್ಹಾಣ್ ಅವರ ಸರಕಾರ ಮಂಡ್ಸೌರ್ ನಲ್ಲಿ ರೈತರ ಮೇಲೆ ಗುಂಡು ಹಾರಿಸಿ ಆರು ರೈತರನ್ನು ಹತ್ಯೆ ಮಾಡಿತ್ತು ಎಂದು ಶಾಸಕರು ಟೀಕಿಸಿದ್ದಾರೆ.
ನೂತನ ಕಾಯ್ದೆಗಳಿಂದ ಕೃಷಿಕರು ಹಿಂದುಳಿಯುವುದಿಲ್ಲ ಎಂದು ಬಿಜೆಪಿ ಹೇಳಿದೆ. ಆದರೆ, ಇಡೀ ದೇಶಕ್ಕೆ ಅನ್ನ ನೀಡುವ ರೈತರು ಇನ್ನುಮುಂದೆ ಬಿಜೆಪಿ ಕಾರ್ಪೋರೇಟ್ ಸ್ನೇಹಿತರಾದ ಅದಾನಿ ಹಾಗೂ ಅಂಬಾನಿ ಹಿತಾಸಕ್ತಿಯ ಸೇವಕರಾಗಿರುತ್ತಾರೆ.
ನೀರಾವರಿ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತಿದೆ. ಪ್ರತಿ ಕೃಷಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡುವುದಿ ನಮ್ಮ ಗುರಿ ಎಂದು ಬಿಜೆಪಿ ಹೇಳಿದೆ. ಆದರೆ, 2018 ರ ವೇಳೆಗೆ ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯ ಶೇ 10 ರಷ್ಟು ಯೋಜನೆಗಳು ಮಾತ್ರ ಪೂರ್ಣಗೊಂಡಿವೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ನಮ್ಮ ಪಾಲಿಗೆ ರೈತರೇ ಅನ್ನದಾತರು ಎಂದು ಬಿಜೆಪಿ ಹೇಳಿದೆ. ಆದರೆ, ರೈತರನ್ನು ಖಲಿಸ್ತಾನಿಗಳು, ಉಗ್ರರು, ಆತಂಕವಾದಿಗಳು ಹಾಗೂ ಚೀನಾ ಮತ್ತು ಪಾಕಿಸ್ಥಾನದ ಏಜೆಂಟರು ಎಂದು ಮೋದಿ ಅವರ ಸಚಿವರೇ ಪದೇ ಪದೇ ಕರೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.