Monday, July 15, 2024
ಮನೆಬಿಸಿ ಬಿಸಿ ಸುದ್ದಿಜನವರಿ 1ರಿಂದ SSLC,PUC ತರಗತಿ ಪ್ರಾರಂಭ: ಜಿಲ್ಲಾ ಪಂಚಾಯತ್ CEO ಡಾ.ಪಿ.ರಾಜಾ

ಜನವರಿ 1ರಿಂದ SSLC,PUC ತರಗತಿ ಪ್ರಾರಂಭ: ಜಿಲ್ಲಾ ಪಂಚಾಯತ್ CEO ಡಾ.ಪಿ.ರಾಜಾ

ಕಲಬುರಗಿ: ಕೋವಿಡ್-19 ಮುನ್ನೆಚ್ಚರಿಕೆ ಕ್ರಮದೊಂದಿಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ತರಗತಿಯನ್ನು ಜನವರಿ 1 ರಿಂದ ಪ್ರಾರಂಭಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ. ರಾಜಾ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯವರು ನೀಡಿರುವ ಮಾರ್ಗಸೂಚಿಗಳ ಅನುಸಾರವೇ ಶಾಲೆಗಳನ್ನು ಪುನರ್ ಪ್ರಾರಂಭಿಸಲಾಗುತ್ತಿದೆ ಎಂದರು.

ಜನವರಿ 1 ರಿಂದ 10 ಮತ್ತು 12ನೇ ತರಗತಿ ಪ್ರಾರಂಭಿಸಿ ತದನಂತರ ಈ ತರಗತಿಗಳ ಅನುಭವದ ಆಧಾರದ ಮೇಲೆ ಜನವರಿ 15 ರಿಂದ 11ನೇ ತರಗತಿ ಪ್ರಾರಂಭೋತ್ಸವದ ಬಗ್ಗೆ ನಿರ್ಧರಿಸಲಾಗುವುದು. 10ನೇ ತರಗತಿಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ವರೆಗೆ 45 ನಿಮಿಷ ಅವಧಿಯ ಮೂರು ಅವಧಿಯಲ್ಲಿ ವಾರದ 6 ದಿನಗಳಲ್ಲಿ ತರಗತಿ ನಡೆಸಲಾಗುವುದು ಎಂದು ಡಾ.ಪಿ.ರಾಜಾ ತಿಳಿಸಿದರು.

ವಿದ್ಯಾಗಮ ಕಾರ್ಯಕ್ರಮ ಪುನರಾರಂಭ: 6 ರಿಂದ 9 ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವು ಜನವರಿ 1 ರಿಂದ ಪುನರ್ ಆರಂಭಿಸಲಾಗುತ್ತಿದೆ. ಈ ತರಗತಿಗಳ ಅನುಭವದ ಆಧಾರದ ಮೇಲೆ ಜನವರಿ 14 ರಿಂದ 1 ರಿಂದ 5ನೇ ತರಗತಿ ಪ್ರಾರಂಭೋತ್ಸವದ ಬಗ್ಗೆ ನಿರ್ಧರಿಸಲಾಗುವುದು. 8 ಮತ್ತು 9ನೇ ತರಗತಿ ಪ್ರೌಢ ಶಾಲೆಗಳಲ್ಲಿ ಸೋಮವಾರ ದಿಂದ ಶುಕ್ರವಾರ ವರೆಗೆ ಮಧ್ಯಾಹ್ನ 2 ರಿಂದ ಸಾಯಂಕಾಲ 4.30 ಗಂಟೆ ವರೆಗೆ ವಿದ್ಯಾಗಮ ಕಾರ್ಯಕ್ರಮ ನಡೆಯಲಿದೆ. 6 ರಿಂದ 9ನೇ ತರಗತಿ ಮಕ್ಕಳು ತಾವಿರುವ ಸ್ಥಳದಲ್ಲಿಯೆ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಬಹುದಾಗಿದೆ.

1 ರಿಂದ 5ನೇ ತರಗತಿ ಶಾಲೆಗಳಲ್ಲಿ 1 ರಿಂದ 3ನೇ ತರಗತಿ ವರೆಗಿನ ಮಕ್ಕಳು ಸೋಮವಾರ ಮತ್ತು 4 ಹಾಗೂ 5ನೇ ತರಗತಿ ಮಕ್ಕಳು ಮಂಗಳವಾರ ತದನಂತರ ದಿನ ಬಿಟ್ಟು ದಿನ ಈ ತರಗತಿಗಳ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ. 1 ರಿಂದ 7 ಮತ್ತು 1 ರಿಂದ 8ನೇ ತರಗತಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಸೋಮವಾರ ಮತ್ತು 6 ರಿಂದ 8ನೇ ತರಗತಿ ಮಕ್ಕಳಿಗೆ ಮಂಗಳವಾರ ತದನಂತರ ದಿನ ಬಿಟ್ಟು ದಿನ ಈ ತರಗತಿಗಳ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ ಎಂದರು.

ಶಾಲೆ ಪುನರಾರಂಭ ಹಿನ್ನೆಲೆಯಲ್ಲಿ ಲಭ್ಯವಿರುವ ಭೌತಿಕ ಸೌಲಭ್ಯಗಳೊಂದಿಗೆ ಶೌಚಾಲಯ, ಶಾಲಾ ಮೈದಾನ ಸ್ವಚ್ಚಗೊಳಿಸಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ತರಗತಿಗಳನ್ನು ಆರಂಭಿಸಲಾಗುವುದು. ಶಿಕ್ಷಕರು ಕೋವಿಡ್-19 ಪರೀಕ್ಷೆಗೆ ಒಳಗಾಗಿಯೆ ಶಾಲಾ ಕರ್ತವ್ಯಕ್ಕೆ ಹಾಜರಾಗುವುದು. ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ ಎಂದ ಡಾ.ಪಿ.ರಾಜಾ ಅವರು ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಈಗ ಅನುಸರಿಸುತ್ತಿರುವ ಆನ್‍ಲೈನ್ ಅಥವಾ ಪರ್ಯಾಯ ವಿಧಾನಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಕಲಬುರಗಿ ಜಿಲ್ಲೆಯಾದ್ಯಂತ 3000 ಶಾಲೆಗಳಿದ್ದು, 40,000ಕ್ಕೂ ಅಧಿಕ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿದ್ದಾರೆ. ಪ್ರತಿ ದಿನ ಶಿಕ್ಷಕರು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಅವಲೋಕಿಸಿ ಕೋವಿಡ್-19 ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಲು ಸಮನ್ವಯತೆ ಸಾಧಿಸಬೇಕು ಎಂದರು.

ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು. ಶಾಲೆಯಲ್ಲಿ ಕೂಡ ಬಿಸಿ ನೀರು ಕೊಡುವ ವ್ಯವಸ್ಥೆ ಮಾಡಲು ಶಾಲೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಶಾಲೆಯ ಪ್ರಾರಂಭೋತ್ಸವದ ಕುರಿತು ಮುಖ್ಯ ಗುರುಗಳು ಹಳ್ಳಿಯಲ್ಲಿ ಡಂಗುರ ಬಾರಿಸಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಶಿಕ್ಷಕರು ಡಿ.28 ರಿಂದ 31ರ ವರೆಗೆ ಮಕ್ಕಳ ಮನೆ-ಮನೆÉಗೆ ಭೇಟಿ ನೀಡಿ ಮಕ್ಕಳನ್ನು ಪೋಷಕರ ಒಪ್ಪಿಗೆ ಪತ್ರ ಸಮೇತ ಶಾಲೆಗೆ ಕಳುಹಿಸುವಂತೆ ತಿಳಿಸಬೇಕು ಎಂದರು.

ಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಬದಲು ಆಹಾರಧಾನ್ಯಗಳನ್ನು ವಿತರಿಸುತ್ತಿರುವುದನ್ನು ಮುಂದುವರೆಸಲಾಗುವುದು. ವಸತಿ ಶಾಲೆಗೆ ಬರುವ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ವರ್ಗ ಕಳೆದ 72 ಗಂಟೆಯಲ್ಲಿ ಪಡೆಯಲಾದ ಕೋವಿಡ್-19 ನೆಗೆಟಿವ್ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಲಕ್ಷಣಗಳನ್ನು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೂಕ್ತ ಚಿಕಿತ್ಸೆಗೆ ದಾಖಲಿಸುವುದಲ್ಲದೆ ಪ್ರತಿ ಶಾಲೆಗಳಲ್ಲಿ ಒಂದು ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಡಿಪಿಐ ಎಸ್.ಪಿ.ಬಾಡಂಗಡಿ ಮತ್ತು ಡಿ.ಹೆಚ್.ಓ. ಡಾ.ರಾಜಶೇಖರ ಮಾಲಿ ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular