ಕಲಬುರಗಿ: ರೈತರು ಬೆಳೆದ ತೊಗರಿ ಬೆಳೆ ಪ್ರತಿ ಪಹಣಿಗೆ 25 ಕ್ವಿಂಟಾಲ್ ನಂತೆ ಸರಕಾರ ಖರೀದಿ ಮಾಡುವ ಮೂಲಕ ಖರೀದಿ ಮಿತಿ ಹೆಚ್ಚಳ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಕಳೆದ ವರ್ಷ ಪ್ರತಿ ಪಹಣಿಗೆ ಕೇವಲ 10 ಕ್ವಿಂಟಾಲ್ ನಂತೆ ಖರೀದಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗಿತ್ತು.ಉಳಿದ ತೊಗರಿ ದಲ್ಲಾಳಿಗಳ ಪಾಲಾಗಿ ರೈತರಿಗೆ ಬೆಲೆ ಸಿಗಲಿಲ್ಲ.ಪ್ರತಿ ವರ್ಷ ಇದೇ ರೀತಿ ತೊಗರಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.ನಂತರ ಕೊನೆಯಲ್ಲಿ ಸರಕಾರ ಪ್ರತಿ ಪಹಣಿಗೆ 20 ಕ್ವಿಂಟಾಲ್ ಗೆ ಹೆಚ್ಚಿಸಿ ಖರೀದಿ ಮಾಡಿತ್ತು.
ಆದರೆ ಆದಾಗಲೇ ಹೆಚ್ಚಿನ ರೈತರು ತೊಗರಿ ಬೇರೆಡೆಗೆ ಮಾರಾಟ ಮಾಡಿದ್ದರಿಂದ ಅವರಿಗೆ ಅನುಕೂಲವಾಗಲಿಲ್ಲ.ಈ ಬಾರಿಯಾದರೂ ಪ್ರಾರಂಭದಲ್ಲಿ ಖರೀದಿ ಮಿತಿ 25 ಕ್ವಿಂಟಾಲ್ ಗೆ ಹೆಚ್ಚಳ ಮಾಡಿ ತೊಗರಿ ಖರೀದಿಸಬೇಕು.ಜೋತೆಗೆ ಬೆಂಬಲ ಬೆಲೆ ನೀಡಿ ಪ್ರತಿ ಕ್ವಿಂಟಾಲ್ ತೊಗರಿಗೆ 8000 ರೂ ನಂತೆ ಖರೀದಿಸಬೇಕು.
ತೊಗರಿ ಖರೀದಿಸಿದ ನಂತರ ವಾರದಲ್ಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು.ಕಲಬುರಗಿಯಲ್ಲಿ ಕೇವಲ ಹೆಸರಿಗಷ್ಟೇ ಇರುವ ತೊಗರಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಚುರುಕುಗೋಳಿಸಬೇಕು.ರೈತರಿಗೆ ಸರಿಯಾದ ಮಾಹಿತಿ ನೀಡಲು ಎಲ್ಲಾ ಕಡೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕು.ಭಾರಿ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು. ಎಂದು ಅವರು ಒತ್ತಾಯಿಸಿದ್ದಾರೆ.