ವಾಡಿ: ಕೃಷಿ ಕಾಯಕವೇ ಬದುಕಾಗಿಸಿಕೊಂಡು ಪತಿಯೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಿರುವ ರೈತ ಮಹಿಳೆಯೊಬ್ಬರು ಗ್ರಾಪಂ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಇಂಗಳಗಿ ಗ್ರಾಮದ ಅನಿತಾ ಮಲ್ಲಪ್ಪ ನಾಟೀಕಾರ ಎಂಬ ರೈತ ಮಹಿಳೆ ಓದಿದ್ದು ೭ನೇ ತರಗತಿಯಾದರೂ ಬೇಸಾಯವೇ ಆದಾಯದ ಮೂಲವಾಗಿಸಿದ್ದಾರೆ. ಗ್ರಾಮದ ವಾರ್ಡ್-೪ ರಿಂದ ಸ್ಪರ್ಧಿಸಿದ ಇವರು ಒಟ್ಟು ೩೭೨ ಮತಗಳನ್ನು ಪಡೆಯುವ ಮೂಲಕ ೨೬೪ ಮತಗಳ ಅಂತರದಿಂದ ಗೆದ್ದಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ತಿಪ್ಪವ್ವ ಈರಣ್ಣ ೧೦೮ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಇಂಗಳಗಿ ಗ್ರಾಪಂಗೆ ಆಯ್ಕೆಯಾದ ೨೦ ಜನ ಸದಸ್ಯರಲ್ಲಿ ಮಹ್ಮದ್ ಗೌಸ್ ದುದ್ದನಿ ಅತಿ ಹೆಚ್ಚು ಮತ (೩೯೫)ಗಳನ್ನು ಪಡೆದ ಸದಸ್ಯರಾದರೆ, ಅನಿತಾ ನಾಟೀಕಾರ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಏಕೈಕ ಸದಸ್ಯೆಯಾಗಿದ್ದಾರೆ. ಗ್ರಾಮಸ್ಥರು ನೂತನ ಸದಸ್ಯೆಯನ್ನು ಸನ್ಮಾನಿಸಿ ಗೌರವಿಸಿದ್ದಾರೆ.