ಸರಕಾರಿ ಶಾಲೆ ಭಣಭಣ-ಖಾಸಗಿ ಮಕ್ಕಳ ಸಂಭ್ರಮ

0
80

ವಾಡಿ: ರಾಜ್ಯ ಸರಕಾರದ ಅದೇಶದಂತೆ ಜ.೧ ರಂದು ಶುಕ್ರವಾರ ಪಟ್ಟಣದ ವಿವಿಧ ಪ್ರೌಢ ಶಾಲೆಗಳ ಬಾಗಿಲು ತೆರೆದು ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಭಯ ಆತಂಕದ ನಡುವೆಯೇ ಬರಮಾಡಿಕೊಳ್ಳಲಾಯಿತು. ಸರಕಾರಿ ಪ್ರೌಢ ಶಾಲೆ ಮಕ್ಕಳಿಲ್ಲದೆ ಭಣಗುಡುತ್ತಿದ್ದರೆ, ಖಾಸಗಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಭ್ರಮವಿತ್ತು.

ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ತರಗತಿ ಪಾಠಗಳು ಪ್ರಾಯೋಗಿಕವಾಗಿ ಮೊದಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಆರಂಭಿಸಲಾಯಿತು. ಕ್ಲಾಸ್ ರೂಮ್‌ಗಳಲ್ಲಿ ಸಾಮೂಹಿಕವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತ ಮಕ್ಕಳು ಶಿಕ್ಷಕರ ಪಾಠ ಕೇಳಿ ಸಂಭ್ರಮಿಸಿದರು. ಹೊಸ ವರ್ಷದ ಆರಂಭದ ದಿನವೇ ಶಾಲೆ ಶುರುವಾಗಿದ್ದರಿಂದ ಮಕ್ಕಳ ಸಂಖ್ಯೆ ಸಹಜವಾಗಿ ಕಡಿಮೆಯಿತ್ತು. ಕೊರೊನಾ ಭೀತಿಯ ನಡುವೆ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿ, ಲಾಕ್‌ಡೌನ್ ಸಂಕಟಗಳ ಅನುಭವ ಮೆಲುಕು ಹಾಕಿದ ಪ್ರಸಂಗಗಳು ನಡೆದವು.

Contact Your\'s Advertisement; 9902492681

ಕರಾಳ ಕೊರೊನಾ ಎದುರಿಸಿ ಮನೆಯಲ್ಲಿ ಉಳಿದಿದ್ದ ಮಕ್ಕಳು ಶಾಲೆಯ ಬಾಗಿಲು ತೆರೆಯುವುದನ್ನೆ ಕಾಯುತ್ತಿದ್ದರೇನೋ ಎಂಬಂತೆ ಶುಕ್ರವಾರ ಅಕ್ಷರ ಕಲಿಕೆಗೆ ಅಣಿಯಾದರು. ಪಟ್ಟಣದಲ್ಲಿ ಸುಮಾರು ೧೨ ಖಾಸಗಿ ಪ್ರೌಢ ಶಾಲೆ ಮತ್ತು ಒಂದು ಸರಕಾರಿ ಪ್ರೌಢ ಶಾಲೆಯಿದೆ. ಶಾಲೆ ಆರಂಭದ ಮೊದಲ ದಿನ ಕೆಲ ಶಾಲೆಗಳು ಎಂದಿನಂತೆ ಮುಚ್ಚಿದ್ದರೆ, ಕೆಲ ಶಾಲೆಗಳು ಮಕ್ಕಳಿಗೆ ಪಾಠ ಬೋಧಿಸಿದವು. ಬಳಿರಾಮ ವೃತ್ತದಲ್ಲಿರುವ ಸರಕಾರಿ ಪ್ರೌಢ ಶಾಲೆಗೆ ಶಿಕ್ಷಕರು ಬಂದರಾದರೂ ಮಕ್ಕಳು ಮಾತ್ರ ಬರಲಿಲ್ಲ. ಬಂದಿದ್ದ ಐವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು, ಪೋಷಕರ ಒಪ್ಪಿಗೆ ಪತ್ರದೊಂದಿಗೆ ಸೋಮವಾರದಿಂದ ತಪ್ಪದೇ ಶಾಲೆಗೆ ಬರುವಂತೆ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಶಿಕ್ಷಣ ಇಲಾಖೆಯ ಆದೇಶವನ್ನು ಪೋಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾದ ಖಾಸಗಿ ಶಿಕ್ಷಣ ಸಂಸ್ಥೆಗಳು, ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿರುವಂತೆ ನೋಡಿಕೊಂಡಿದ್ದಾರೆ. ಬಹುತೇಕ ಖಾಸಗಿ ಪ್ರೌಢ ಶಾಲೆಗಳಲ್ಲಿ ಹತ್ತನೇ ತರಗತಿ ಮಕ್ಕಳ ಸ್ನೇಹದ ಸಮಾಗಮದ ಜತೆಗೆ ಸಂಭ್ರಮ ಮನೆಮಾಡಿತ್ತು.

ಶುಭಕೋರಿದ ಎಐಡಿಎಸ್‌ಒ: ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನಾಯಕರು, ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕೊರೊನಾ ವೈರಸ್ ಭೀತಿಯಿಂದ ಹೊರ ಬರಬೇಕು. ಬೇಜವಾಬ್ದಾರಿ ತೋರದೆ ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಗಡಿ, ಕೆಮ್ಮು ಸೀತದಿಂದ ಇತರರನ್ನು ಸುರಕ್ಷಿತವಾಗಿಡಲು ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಮಗಳಡಿ ಶಿಕ್ಷಣ ಪಡೆದುಕೊಳ್ಳಬೇಕು. ವರ್ಷದ ನಂತರ ಪಾಠಗಳು ಶುರುವಾಗಿದ್ದು, ಅಧ್ಯಯನದತ್ತ ಹೆಚ್ಚು ಆಸಕ್ತಿ ತೋರಬೇಕು ಎಂದು ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಅರೂಣಕುಮಾರ ಹಿರೆಬಾನರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here