ಯಾದಗಿರಿ: ಶಾಲಾ ಕಟ್ಟಡವೊಂದು ಉಪಯೋಗಕ್ಕೆ ಬಾರದೆ ಪಾಳು ಬಿದ್ದ ದುಸ್ಥಿತಿಯಲ್ಲಿರುವುದು ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಕಂಡು ಬಂದಿತು.
ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಬಸ್ ನಿಲ್ದಾಣದ ರಸ್ತೆಗೆ ಹೊಂದಿಕೊಂಡಿರುವ ಪ್ರಾಥಮಿಕ ಶಾಲಾ ಕಟ್ಟಡ ಬಳಕೆಯಾಗದೆ ನಿರುಪಯುಕ್ತಗೊಂಡಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತವೆ ಆದರೆ ಈ ಗ್ರಾಮದಲ್ಲಿ ಶಾಲಾ ಸುತ್ತಮುತ್ತಲೂ ತಿಪ್ಪೆಗುಂಡಿಗಳು ಹಾಕಿರುವುದರಿಂದ ಗಬ್ಬೆದ್ದು ನಾರುತ್ತಿದ್ದು ಉಪಯೋಗಕ್ಕೆ ಬಾರದಂತಾಗಿದೆ.
ಜನಪ್ರತಿನಿಧಿಗಳಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕಿಂಚಿತ್ತಾದರೂ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಬೇಸರ ವ್ಯಕ್ತಪಡಿಸಿ ಇದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕಟ್ಟಡವನ್ನು ಸ್ವಚ್ಛತೆಗೊಳಿಸಿ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪ್ರಗತಿಪರ ಚಿಂತಕರು ಹೋರಾಟಗಾರರು ಕೂಡಿಕೊಂಡು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಿದರು.