ಬೀದರ್: ಕೃಷಿಯಲ್ಲಿ ನೀರಿನ ಬಳಕೆ ತಗ್ಗಿಸಲು ಹನಿ ನೀರಾವರಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಶಿವಪುತ್ರ ಶಂಭು ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ತಾಜಲಾಪೂರ್ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ತರಕಾರಿ ಕೃಷಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ತರಕಾರಿ ಬೆಳೆಸುವ ರೈತರು ನರ್ಸರಿಯಿಂದ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು ನಾಟಿ ಮಾಡಬೇಕು ಎಂದರು.
ಒಂದು ಎಕರೆಗೆ 4000 ಸಸಿಗಳ ಅವಶ್ಯಕತೆ ಇರುತ್ತದೆ. ತೋಟಗಾರಿಕಾ ಇಲಾಖೆಯ ಸಹಾಯಧನ ಪಡೆದುಕೊಂಡು ಪ್ಲಾಸ್ಟಿಕ್ ಹೊದಿಕೆ ಪದ್ಧತಿಯಿಂದ ರೈತರು ಮಿಶ್ರ ಬೆಳೆಗಳಾಗಿ ಬೇರೆ ಬೇರೆ ತರಕಾರಿಗಳನ್ನು ಬೆಳೆಯಬಹುದು. ಮೆಣಸಿನಕಾಯಿ ಬೆಳೆಗೆ ವಿಮೆ ಸೌಲಭ್ಯ ಇದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನಾಧಿಕಾರಿ ರಮೇಶ್ ಸಿ. ಅವರು ಮಾತನಾಡಿ, ರೈತರು ವೈಜ್ಞಾನಿಕವಾಗಿ ತರಕಾರಿ ಕೃಷಿ ಬೆಳೆ ಬೆಳೆದು ಹೆಚ್ಚಿನ ಲಾಭ ಗಳಿಸಬೇಕು ಎಂದರು. ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷೆ ಸಂತೋಷಿ ಲದ್ದೆ ಅವರು ಉದ್ಘಾಟಿಸಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಆನಂದ್ ಬಿರಾದರ್, ಮಹಾಂತೇಶ್ ಎಂ.ಡಿ., ಮೋಟಯ್ಯ ಬಿಎಸ್, ನಿರ್ಮಲಾ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.