ಬೀದರ್: ನಗರಸಭೆಯ ಮಾಜಿ ಸದಸ್ಯರೂ ಆದ ಜೆಡಿ(ಎಸ್) ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಬಿ ಖುರೇಶಿ ಅವರು ರಾಜ್ಯದ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ಜನ್ಮದಿನಕ್ಕೆ 1.20 ಕ್ವಿಂಟಲ್ ತೂಕದ ಬೃಹತ್ ಕೇಕ್ ಸಿದ್ಧಪಡಿಸಿ ಅಭಿಮಾನ ಮೆರೆದರು.
ಚೌಬಾರಾ ರಸ್ತೆಯಲ್ಲಿ ಇರುವ ಅಲ್ ಜುಬೇರ್ ಬೇಕರಿಯವರಿಗೆ ಆರ್ಡರ್ ನೀಡಿದ್ದ ಕೇಕ್ ಅನ್ನು 8 ಜನ ಕಾರ್ಮಿಕರು 12 ಗಂಟೆಗಳಲ್ಲಿ ತಯಾರಿಸಿದ್ದರು. ಬಂಡೆಪ್ಪ ಕಾಶೆಂಪೂರ್ ಅವರಿಗೆ 55ನೇ ಜನ್ಮದಿನದ ಶುಭಾಶಯ ಎಂದು ಬರೆದಿದ್ದ ಕೇಕ್ ನೋಡಲು ಆಕರ್ಷಕ, ಅಷ್ಟೇ ಸ್ವಾದಿಷ್ಟವೂ ಆಗಿತ್ತು.
ಗುರುವಾರ ರಾತ್ರಿ 12 ಗಂಟೆಗೆ ನಬಿ ಖುರೇಶಿ ಅವರು ಬಂಡೆಪ್ಪ ಕಾಶೆಂಪೂರ ಅವರನ್ನು ಗವಾನ್ ಬಳಿ ಕರೆಸಿ ಅವರಿಂದಲೇ ಬೃಹತ್ ಗಾತ್ರದ ಕೇಕ್ ಕಟ್ ಮಾಡಿಸಿದರು. ಕಾಶೆಂಪೂರ್ ಅವರಿಗೆ ತಿನ್ನಿಸಿದ ನಂತರ ಕೇಕ್‍ನ ತುಂಡುಗಳನ್ನು ಮಾಡಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಹಾಗೂ ಅಭಿಮಾನಿಗಳಿಗೆ ವಿತರಿಸಿದರು.
ಇದಕ್ಕೂ ಮುನ್ನ ನಬಿ ಖುರೇಶಿ ಅವರ ಬೆಂಬಲಿಗರು ಕಾಶೆಂಪೂರ್ ಅವರನ್ನು ಚೌಬಾರಾದಿಂದ ಪಟಾಕಿ ಸಿಡಿಸುತ್ತ ಗಾವಾನ್ ಚೌಕ್ ವರೆಗೆ ಮೆರವಣಿಗೆಯಲ್ಲಿ ಕರೆ ತಂದರು. ಅವರಿಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.
ಕಾಶೆಂಪೂರ್ ಅವರ ಕಟ್ಟಾ ಬೆಂಬಲಿಗರಾಗಿರುವ ನಬಿ ಖುರೇಶಿ ಅವರು ಪ್ರತಿ ವರ್ಷ ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸುತ್ತ ಬರುತ್ತಿದ್ದಾರೆ. ಈ ಬಾರಿ ಬೃಹತ್ ಗಾತ್ರದ ಕೇಕ್ ತಯಾರಿಸಿ ಜನ್ಮದಿನ ಆಚರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಜೆಡಿ(ಎಸ್) ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.