ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹಾರದಲ್ಲಿ ರಸಗೊಬ್ಬರ ಮಾರಾಟಗಾರರಿಂದ ಲಕ್ಷಾಂತರ ರೂ. ಕ್ರಿಮಿನಾಶಕ ಮತ್ತು ಬೀಜ, ಗೊಬ್ಬರವನ್ನು ಉದ್ರಿ ಖರೀದಿ ಮಾಡಿ ಪುನಃ ಅವರ ವಿರುದ್ಧವೇ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಪ್ರೊ.ನಂಜುಂಡಸ್ವಾಮಿ ಬಣ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯ್ಕೋಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಮನೆಯಲ್ಲಿ ಸಭೆಯಲ್ಲಿ, ಗಂವ್ಹಾರ ಸೇರಿ ಸುತ್ತಲಿನ ಹಲವಾರು ರೈತರು, ಕೃಷಿ ವಿತರಕರು ಹಾಗೂ ಅಂಗಡಿಯವರು ಇದ್ದರು. ಶಾಸಕರ ಗಮನಕ್ಕೆ ತರಲಾಗಿದ್ದು, ಹಣ ನೀಡಲು ಒಪ್ಪುತ್ತಿಲ್ಲ ಎಂದು ನಾಯ್ಕೋಡಿ ತಿಳಿಸಿದ್ದಾರೆ.
ರಸಗೊಬ್ಬರ ಅಂಗಡಿಗಳಲ್ಲಿ ನಾನಾ ಕ್ರಿಮಿನಾಶಕ, ಗೊಬ್ಬರ ಖರೀದಿ ಮಾಡಿರುವ ಚಾಂದ್‌ಪಾಶಾ ಲಕ್ಷಾಂತರ ರೂ. ಕೊಡಬೇಕು. ಆದರೆ, ಕೊಡುವ ಹಣ ಕೇಳಿದರೆ ನಿಮ್ಮ ಬೀಜ ಸರಿಯಾಗಿಲ್ಲ, ಕ್ರಿಮಿನಾಶಕ ಸರಿಯಾಗಿಲ್ಲ ಎಂದು ದೂರು ನೀಡಿದ್ದರು. ಈ ಕುರಿತು ಕೃಷಿ ಇಲಾಖೆಯಿಂದ ತಪಾಸಣೆ ಮಾಡಿ ತೇವಾಂಶ ಕೊರತೆ ಮತ್ತು ಹೆಚ್ಚಳದಿಂದ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ. ಹೀಗಿದ್ದರೂ ಹಣ ನೀಡದೆ ಸತಾಯಿಸುವುದು ನಾನಾ ಸಂಘಟನೆಗಳಿಂದ ರಸಗೊಬ್ಬರ ಅಂಗಡಿ ಮಾಲೀಕರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿ ಎಂದು ತಿಳಿಸಿದ್ದಾರೆ.
ಈ ಹಿನ್ನೆಲ್ಲೇಯಲ್ಲಿ ಇಂದು ಬೆಳಗ್ಗೆ ಗಂವ್ಹಾರದಲ್ಲಿ ಬೃಹತ್ ಮಟ್ಟದಲ್ಲಿ ನ್ಯೂ ಕರ್ನಾಟಕ ಅಗ್ರೋ ಏಜೆನ್ಸಿಸ್‌ನ ಅಬ್ದುಲ್ ಹಮೀದ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದ್ದು, 300ಕ್ಕೂ ಹೆಚ್ಚು ರೈತರು, ರಸಗೊಬ್ಬರ ವಿತರಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.