ಪುಣ್ಯ ಸ್ನಾನಗೈದು ಸಾಮೂಹಿಕ ಭೋಜನ: ಸಂಗಮನಾಥನ ದರ್ಶನ

0
51

ವಾಡಿ: ಇಲ್ಲಿಗೆ ಸಮೀಪದ ಕುಂದನೂರು, ಯನಗುಂಟಿ ಹಾಗೂ ಹೊನಗುಂಟಿ ಗ್ರಾಮಗಳ ಮಧ್ಯದ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮ ತಟದಲ್ಲಿ ಎಂದಿನಂತೆ ಸಂಕ್ರಾಂತಿ ಸಡಗರ ಮನೆಮಾಡಿತ್ತು. ಚಿತ್ತಾಪುರ, ಶಹಾಬಾದ ಮತ್ತು ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ನದಿಯಲ್ಲಿ ಸೇರಿ ಪುಣ್ಯಸ್ನಾಗೈಯುವ ಮೂಲಕ ಶ್ರೀಸಂಗಮೇಶ್ವರನ ಕೃಪೆಗೆ ಪಾತ್ರರಾದರು.

ಹಬ್ಬದ ಬುತ್ತಿ ಹೊತ್ತು ಬಂದ ಮಹಿಳೆಯರು, ಯುವತಿಯರು, ಹಿರಿಯರು ನದಿ ದಡದಲ್ಲಿ ಬೀಡುಬಿಟ್ಟು ಸಂಗಮಗೊಂಡ ಗಂಗೆಯ ಪಾತ್ರದಲ್ಲಿ ಜಲಕ್ರೀಡೆಗೆ ಮುಂದಾದರು. ಸಂಕ್ರಾಂತಿಯ ವಿಶೇಷತೆಗಳಲ್ಲೊಂದಾದ ಎಳ್ಳು ಅರಿಶಿಣ ಮಿಶ್ರಣದ ಹೊಳೆ ಸ್ನಾನ ಭಕ್ತಿಯ ಪ್ರತೀಕವಾಗಿತ್ತು. ನೀರಿನಲ್ಲಿ ಮಕ್ಕಳಾಟವೂ ಮನಸೂರೆಗೊಂಡಿತು.

Contact Your\'s Advertisement; 9902492681

ಮನೆಯಿಂದ ತರಲಾಗಿದ್ದ ಬುತ್ತಿಯೊಳಗಿನ ಸೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಎಣ್ಣೆಬದನೆಕಾಯಿ ಪಲ್ಲೆ, ಕಬ್ಬು, ಸುಲಿಗಾಯಿ, ಹಸಿ ತರಕಾರಿ ದಿನಿಸಿನ ಭೋಜನ ಮೃಷ್ಟಾನ್ನಕ್ಕೆ ಸಮವಾಗಿತ್ತು. ನದಿಯ ದಡದ ಮರಳಿನಲ್ಲಿ ಯುವಕರು ವಿವಿಧ ಆಟಗಳನ್ನಾಡಿ ಮನರಂಜನೆಯಲ್ಲಿ ತೊಡಗಿದ್ದು ಕಂಡುಬಂದಿತು. ಊಟದ ನಂತರ ಯಂತ್ರಚಾಲಿತ ಹಡಗಿನಲ್ಲಿ ಹೊರಟು ಝುಳುಝುಳು ಜಲದ ಆನಂದ ಪಡೆದುಕೊಂಡರು.

ಇದೇ ವೇಳೆ ನದಿ ದಂಡೆಯಲ್ಲಿರುವ ಶ್ರೀ ಸಂಗಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಮಲ್ಲೇಶಪ್ಪ ಹೂಗಾರ ಅವರು ಬಂದ ಭಕ್ತರಿಗೆ ಪ್ರಸಾದ ಸೇವೆ ಮಾಡಿದ್ದರು. ಮೂರು ತಾಲೂಕಿನ ಜನರು ಒಂದೆಡೆ ಸೇರಿ ಸಂಕ್ರಾಂತಿ ಆಚರಿಸಿದ್ದೇ ಇಲ್ಲಿನ ಮತ್ತೊಂದು ವಿಶೇಷ ಎನ್ನಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here