ಕಲಬುರಗಿ: ಅತ್ಯಂತ ಶ್ರೀಮಂತವಾಗಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಅರ್ಥಮಾಡಿಕೊಂಡು ಭವಿಷ್ಯದ ಕನ್ನಡ ಕಟ್ಟಬೇಕಾಗಿದೆ. ತಂತ್ರಾಂಶ ಬಳಸಿಕೊಂಡು ಮುನ್ನಡೆದಾಗ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸಲಹೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗುಲ್ಬರ್ಗ ವಿಶ್ವ ವಿದ್ಯಾಲಯದ ಕನ್ನಡ ಆಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಸೋಮವಾರ ಜರುಗಿದ ಕವಿರಾಜ ಮಾರ್ಗ ಪರಿಸರದ ಭಾಷೆ ಮತ್ತು ಸಂಸ್ಕೃತಿ ಒಂದು ದನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಹೀಗೆ ಹರಿದು ಹಂಚಿಹೋಗಿರುವ ಮನೋಭಾವ, ಮನಸ್ಥಿತಿಯನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಒಂದು ಪ್ರದೇಶದ ಅಭಿವೃದ್ಧಿಯನ್ನು ಕೇವಲ ರಸ್ತೆ ಮತ್ತು ಕಟ್ಟಡಗಳಿಂದ ಅಳೆಯಲು ಬರುವುದಿಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆಯಿಂದ ಮಾತ್ರ ಸಾಧ್ಯ ಎಂದರು. ರಾಷ್ಟ್ರಕೂಟರ ಕಾಲದ ಕವಿರಾಜಮಾರ್ಗಕಾರ ಇಡೀ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಗೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ ಇತರ ಭಾಗಸವರಿಗೆ ಹೆದ್ದಾರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿವಿ ಕುಲಪತಿ ಪ್ರೊ. ಚಂದ್ರಕಾಂತ ಎಂ. ಯಾತನೂರ ಮಾತನಾಡಿ, ಈ ಭಾಗಕ್ಕೆ ದೊರೆಯಬೇಕಾಗಿದ್ದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಇಂದಿಗೂ ಪ್ರಾತಿನಿದ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ವ್ತಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಧಾರವಾಡ ಕರ್ನಾಟಕ ವಿವಿ ವಿಶ್ರಾಂತ ಪ್ರಧ್ಯಾಪಕ ಪ್ರೊ. ಶಾಂತಿನಾಥ ದೇಸಾಯಿ, ಕನ್ನಡ ಭಾಷೆ, ಕನ್ನಡ ಕವಿಗಳಿಗೆ ರಾಜಮಾರ್ಗವಾಗಿರುವ ಕವಿರಾಜ ಮಾರ್ಗ ಕೃತಿ ಕನ್ನಡದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿದೆ. ಕಾವ್ಯ, ನಾಡು, ನಾಡವರ್ ಗಳ ಬಗ್ಗೆ ಮಾತನಾಡಿದ ಒಂದು ವಿಲಕ್ಷಣ ಕೃತಿಯಾಗಿದೆ ಎಂದು ಹೇಳಿದರು.
ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮಣ ರಾಜನಾಳಕರ ಅತಿಥಿಯಾಗಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ, ಸಾಂಸ್ಕೃತಿಕ, ಸಾಹಿತ್ಯಕ ಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ ಇಡೀ ಅಖಂಡ ಕರ್ನಾಟಕಕ್ಕೆ ಬಹಳ ಮಹತ್ವದ ಕೊಡುಗೆ ನೀಡಿದೆ. ಆದರೆ ಅವಕಾಶಗಳಿಂದ ಈ ನೆಲ ವಂಚಿತವಾಗಿದೆ ಎಂದು ವಿಷಾದ ವ್ತಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿದರು. ಡಾ. ಹನುಮಂತ ಮೇಲ್ಕೇರಿ ನಿರೂಪಿಸಿದರು. ಹರಿಪ್ರಿಯಾ ವಚನ ಪ್ರಾರ್ಥನೆ ನೆರವೇರಿಸಿದರು. ಡಾ. ಶೈಲಜಾ ಬಾಗೇವಾಡಿ ವಂದಿಸಿದರು.