ಕಲಬುರಗಿ: ಹೊಸ ಕೃಷಿ ಮಸೂದೆಗಳ ಮೂಲಕ ಕಾರ್ಪೋರೇಟ್ ಕಂಪನಿಗಳು ದೇಶದ ರೈತರ ಗೋರಿ ಕಟ್ಟಲು ಬರುತ್ತಿವೆ. ಬಿಜೆಪಿ ಸರಕಾರ ಪೋಷಿಸುತ್ತಿರುವ ಅಂಬಾನಿ, ಅದಾನಿಗಳಂತಹ ಶೋಷಕರ ಹಡೆಮುರಿ ಕಟ್ಟಲು ರೈತರು ಸಿದ್ಧರಾಗಬೇಕು ಎಂದು ರೈತ ಕೃಷಿ-ಕಾರ್ಮಿಕ ಸಂಘಟನೆಯ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಕರೆ ನೀಡಿದರು.
ಕೇಂದ್ರ ಸರಕಾರದ ಕೃಷಿ ಶಾಸನಗಳ ವಿರುದ್ಧ ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಅಳ್ಳೊಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ರೈತರ ಆಗ್ರಹ ಜೀಪ್ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಹೊಸ ಕೃಷಿ ನೀತಿಗಳು ಜಾರಿಯಾದರೆ ಬೆಳೆ ಖರೀದಿಯಲ್ಲಿ ಉದ್ಯಮಿಗಳು ರೈತರನ್ನು ಹೆಚ್ಚು ವಂಚಿಸುತ್ತಾರೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಸೌಲಭ್ಯವೂ ಇಲ್ಲದಂತಾಗುತ್ತದೆ. ರೈತರು ಕಾರ್ಪೋರೇಟ್ ಕಂಪನಿಗಳ ಮೋಸ, ವಂಚನೆಯ ಬಲೆಯಲ್ಲಿ ಸಿಲುಕುತ್ತಾರೆ. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳಿಂದ ಆಗುತ್ತಿರುವ ವಂಚನೆಯಿಂದ ರೈತರಿಗೆ ರಕ್ಷಣೆ ನೀಡುವ ನೆಪದಲ್ಲಿ ಹಿಂದೆ ಜಾರಿಯಲ್ಲಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿ, ರೈತರ ಉತ್ಪನ್ನಗಳ ವಾಣಿಜ್ಯ ವ್ಯಾಪಾರ ಕಾಯ್ದೆಯನ್ನು ಜಾರಿಗೆ ತರಲು ಷಢ್ಯಂತ್ರ ನಡೆದಿದೆ ಎಂದು ಆಪಾದಿಸಿದರು.
ದೇಶದಲ್ಲಿ ಜನತಾಂತ್ರಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನಾಭಿಪ್ರಾಯ ಸಂಗ್ರಹಿಸದೆ ತರಾತುರಿಯಲ್ಲಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಪಾಸ್ ಮಾಡಲಾಗುತ್ತಿದೆ. ಬಹುಮತದ ಸರ್ಕಾರ ಇದೆ ಎಂಬಕಾರಣಕ್ಕೆ ಸರ್ವಾಧೀಕಾರಿ ಆಡಳಿತ ನಡೆಸುವಂತಿಲ್ಲ. ಜನವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವುದು ಜನತೆ ಮಾಡು ಮಹಾ ದ್ರೋಹವಾಗುತ್ತದೆ. ರೈತರು ಚಳಿಯಲ್ಲಿ ತಿಂಗಳುಗಟ್ಟಲೇ ಹೋರಾಟದಲ್ಲಿದ್ದರೂ ಮೊಂಡ ಸರ್ಕಾರ ಕೈಕಟ್ಟಿ ಕುಳಿತಿದೆ. ದೇಶದಾದ್ಯಂತ ರೈತ ಚಳುವಳಿ ಭುಗಿಲೆದ್ದಿದೆ. ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬೀದಿಗಿಳಿಯುತ್ತಿವೆ. ಜ.೨೬ ರಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ವಿಧಾನಸೌಧ ಮುತ್ತಿಗೆ ಚಳುವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಜನತೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವಾಡಿ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಮುಖಂಡರಾದ ಶರಣು ವಿ.ಕೆ, ವೆಂಕಟೇಶ ದೇವದುರ್ಗ, ಶರಣು ಹೇರೂರ, ಭಾಗಣ್ಣ ಬುಕ್ಕಾ, ಮಲ್ಲಣ್ಣ ದಂಡಬಾ, ಮಲ್ಲಿನಾಥ ಹುಂಡೇಕಲ್, ಶಿವುಕುಮಾರ ಆಂದೋಲಾ, ರಾಜು ಒಡೆಯರ, ವಿಠ್ಠಲ ರಾಠೋಡ, ಗೋವಿಂದ ಯಳವಾರ, ದತ್ತಾತ್ರೇಯ ಹುಡೇಕರ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜೀಪ್ ಜಾಥಾ ಮೂಲಕ ಕ್ರಾಂತಿಕಾರಿ ಘೋಷಣೆಗಳನ್ನು ಕೂಗುತ್ತ ಸಂಘಟಕರು ವಿವಿಧ ಹಳ್ಳಿಗಳಿಗೆ ತೆರಳಿದರು.