ಕಲಬುರಗಿ ಮಹಾನಗರದಲ್ಲಿ ಕನ್ನಡ ವಾತಾವರಣ ಮೂಡಿಸಿ: ಟಿ.ಎಸ್.ನಾಗಾಭರಣ

0
23

ಕಲಬುರಗಿ: ಒಂದು ವಾರದಲ್ಲಿ ಕಲಬುರಗಿ ಮಹಾನಗರದಲ್ಲಿ ಸಂಪೂರ್ಣ ಕನ್ನಡ ವಾತಾವರಣ ಮೂಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ತಿಳಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ಕನ್ನಡ ಜಾಗೃತಿ ಸಮಿತಿಯೊಂದಿಗೆ ಮಂಗಳವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡುತ್ತಿದ್ದ ಅವರು, ಕನ್ನಡ ಅನುಷ್ಠಾನಕ್ಕಾಗಿ ಈ ಬಗ್ಗೆ ಶಪಥ ಕೈಗೊಳ್ಳಬೇಕು. ಇಲ್ಲಿಯ ಕನ್ನಡ ವಾತಾವರಣ ಇತರೆ ನಗರಗಳಿಗೆ ಮಾದರಿಯಾಗಬೇಕು ಎಂದರು.

Contact Your\'s Advertisement; 9902492681

ಪಾಲಿಕೆ ವ್ಯಾಪ್ತಿಯ ಎಲ್ಲಾ ಅಂಗಡಿ-ಮಳಿಗೆಗಳ ಮುಂದೆ ಕನ್ನಡದಲ್ಲಿ ನಾಮಫಲಕ ಕಡ್ಡಾಯವಾಗಿ ಹಾಕಿರಬೇಕು. ನಾಮಫಲಕ ಹಾಕಿರದಂತಹ ಅಂಗಡಿ-ಮಳಿಗೆಗಳ ಪರವಾನಿಗಿ ನವೀಕರಣ ಮಾಡಬಾರದು. ಈ ಸಂಬಂಧ ಕನ್ನಡ ಜಾಗೃತಿ ಸಮಿತಿ ಸದಸ್ಯರ ಜೊತೆಗೂಡಿ ಅಭಿಯಾನ ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಹಾಗೆಯೇ ಕನ್ನಡಿಗರಿಗೆ ಮಾತ್ರ ಪಾಲಿಕೆಯಲ್ಲಿ ಉದ್ಯೋಗ ಸಿಗುವಂತಾಗಬೇಕು. ಒಂದೊಮ್ಮೆ ಕನ್ನಡ ಬಾರದವರಿದ್ದರೆ ಕನ್ನಡ ಕಲಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಜಿಲ್ಲಾ ತರಬೇತಿ ಕೇಂದ್ರ(ಡಿಟಿಐ)ದಲ್ಲಿ ಕನ್ನಡ ಕಲಿಕಾ ತರಬೇತಿ ಕೊಡಿಸಬೇಕು ಎಂದು ತಿಳಿಸಿದರು.

ಇನ್ನು ಹೊರಗುತ್ತಿಗೆ ಮೂಲಕ ಅನ್ಯ ಭಾಷಿಕರು ಕೆಲಸಕ್ಕೆ ಸೇರುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸೇವೆ ನೀಡುವ ಬಾಹ್ಯಮೂಲ ಸಂಸ್ಥೆಗೆ ಅರಂಭದಲ್ಲೇ ಕನ್ನಡಿಗರನ್ನು ಮಾತ್ರ ಸೇವೆಗೆ ನೀಡಬೇಕು ಎಂಬ ಷರತ್ತು ಹಾಕಿರಬೇಕು ಎಂದು ಅವರು ಹೇಳಿದರು.

ಇನ್ನು ನಗರದ ಹೊಸ ಬಡಾವಣೆಗಳ ರಸ್ತೆಗಳಿಗೆ ಹೆಸರಿಟ್ಟು ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂದ ಅವರು ಪಾಲಿಕೆಯಲ್ಲಿ ಸಂಪೂರ್ಣ ಕನ್ನಡ ಆಡಳಿತ ಭಾಷೆಯಾಗಿಸಬೇಕು, ಜೊತೆಗೆ ಕಚೇರಿ ಕಟ್ಟಡದ ಗೋಡೆಯ ಮೇಲೆ ಕನ್ನಡ ನುಡಿಮುತ್ತುಗಳನ್ನು ಬರೆಸಬೇಕು ಎಂದು ಹೇಳಿದರು.

ಮುಖ್ಯರಸ್ತೆಗೆ ನಾಮಫಲಕ: ಹುಮನಾಬಾದ್ ರಿಂಗ್ ರಸ್ತೆಯಿಂದ ಕೇಂದ್ರಬಸ್ ನಿಲ್ದಾಣ ಮಾರ್ಗಕ್ಕೆ ಶ್ರೀ ಶರಣ ಬಸವೇಶ್ವರ ಹೆಸರು, ಕೇಂದ್ರ ಬಸ್ ನಿಲ್ದಾಣದಿಂದ ಜೇವರ್ಗಿ ರಸ್ತೆಗೆ ಷಣ್ಮುಖ ಶಿವಯೋಗಿ ರಸ್ತೆ, ಸೇಡಂ ರಸ್ತೆಗೆ ಅಮೋಘವರ್ಷ ನೃಪತುಂಗ ರಸ್ತೆ ಮುಂತಾದ ಹೆಸರುಗಳುಳ್ಳ ಪಟ್ಟಿಯನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರು ನೀಡಿದ್ದು, ಈ ಬಗ್ಗೆ ಸಭೆ ಕರೆದು ಚರ್ಚಿಸಿ, ಆಕ್ಷೇಪಗಳನ್ನು ಇತ್ಯರ್ಥಗೊಳಿಸಿ ನಾಮಕರಣ ಮಾಡಬೇಕು ಎಂದು ಸಲಹೆ ನೀಡಿದರು.

ಕಡಿಕೋಳ ಮಡಿವಾಳಪ್ಪ, ದೇವರ ದಾಸಿಮಯ್ಯ, ವಿರೇಂದ್ರ ಪಾಟೀಲ್, ಅಲ್ಲಮ ಪ್ರಭು, ಅಕ್ಕಮಹಾದೇವಿ ರಸ್ತೆ ಮುಂತಾದ ಪಟ್ಟಿಯಲ್ಲಿದ್ದ ಹೆಸರುಗಳನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ. ಮುರಳೀಧರ ಅವರು ಮಾತನಾಡಿ, ಬೇರೆ ಭಾಷೆಯವರು ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೆ ಅವರಿಗೆ ಪ್ರಾಧಿಕಾರ ವತಿಯಿಂದ ಕನ್ನಡ ಕಲಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಮೂರು ತಿಂಗಳುಗಳಲ್ಲಿ ಕನ್ನಡ ಕಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ್ ಅವರು ಮಾತನಾಡಿ, ಎಲ್ಲಾ ಅಧಿಕಾರಿಗಳು ಕಚೇರಿಗೆ ಬರುವ ನಾಗರಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಹಾಗೂ ಕನ್ನಡದಲ್ಲೆ ನಿಗದಿತ ಅವಧಿಯೊಳಗೆ ಕೋರಿದ ಪ್ರಮಾಣ ಪತ್ರಗಳನ್ನು ನೀಡಬೇಕು, ವಿನಾಕಾರಣ ಅಲೆದಾಡಿಸಬಾರದೆಂದು ಹೇಳಿದರು.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮಾತನಾಡಿ, ಪಾಲಿಕೆ ಕಚೇರಿ ಆಡಳಿತ ಭಾಷೆ ಸೇರಿದಂತೆ ನಗರದಲ್ಲಿ ಕನ್ನಡ ಅನುಷ್ಠಾನವನ್ನು ನೂರಕ್ಕೆ ನೂರರಷ್ಟು ಮಾಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ. ವೀರಶೆಟ್ಟಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ದತ್ತಪ್ಪ ಸಾಗನೂರು, ನಾಮನಿರ್ದೇಶಿತ ಅಧಿಕಾರೇತರ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here