ಕಲಬುರಗಿ: ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ನದಾಫ್, ಪಿಂಜಾರ ಸಮುದಾಯಕ್ಕೆ ರಾಜ್ಯದಲ್ಲಿ ಪ್ರತ್ಯೇಕವಾಗಿ ನದಾಫ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಜಿಲ್ಲಾ ಘಟಕದಿಂದ ನಗರದ ಡಿಸಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ಕೈಗೊಂಡು ಆಗ್ರಹಿಸಿತು.
ರಾಜ್ಯದಲ್ಲಿ ನದಾಫ್, ಪಿಂಜಾರ ಸಮುದಾಯದಲ್ಲಿ ೩೮ ಲಕ್ಷಕ್ಕೂ ಹೆಚ್ಚಿನ ಜನರು ಹತ್ತಿಯಿಂದ ಗಾದೆ ನೆಯುಗಾರಿಕೆಯಲ್ಲಿ ಪಳಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಹೀಗಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಬೇಕೆಂದು ರಾಜ್ಯದ್ಯಂತ ಒತ್ತಾಯಿಸುತ್ತಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಿ. ಎಸ್ ದ್ವಾರಕನಾಥ ಸಮಿತಿ ಆಧರಿಸಿದಂತೆ ಈಗಾಗಲೇ ಹಿಂದುಳಿದ ಜನಾಂಗಗಳಾದ ವಿಶ್ವಕರ್ಮ, ಬೋವಿ, ಉಪ್ಪಾರ, ಲಂಬಾಣಿ ಸಮುದಾಯಗಳ ಅಭಿವೃದ್ಧಿಗೆ ನಿಗಮ ಮಂಡಳಿ ರಚಿಸಿದೆ, ದ್ವಾರಕನಾಥ ಸಮಿತಿಯು ನದಾಫ್ ಸಮುದಾಯವನ್ನು ಅತೀ ಹಿಂದುಳಿದ ಸಮುದಾಯವೆಂದು ಪರಿಗಣಿಸಿ ವರದಿ ಸಲ್ಲಿಸಿದೆ, ಹೀಗಾಗಿ ನದಾಫ್/ ಪಿಂಜಾರ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರ ಕೂಡಲೇ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂದು ಒತ್ತಡ ಹೇರಿದೆ. ಈ ಕುರಿತಂತೆ ಪ್ರತಿಭಟನಾ ಸ್ಥಳದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮೌಲಾಲಿ ಎಂ. ನದಾಫ್ ಮಾತನಾಡಿ, ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಸಮುದಾಯ ಹಿಂದುಳಿದೆ, ಜಿಲ್ಲೆಯಲ್ಲೂ ೧.೫ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ವಿವಿಧ ರೀತಿಯಲ್ಲಿ ಹಿಂದುಳಿದಿದೆ, ಸರ್ಕಾರ ಕೂಡಲೇ ಎಚ್ಚೆತ್ತು ನದಾಫ್ ಸಮಾಜಕ್ಕೆ ನಿಗಮ ಸ್ಥಾಪಿಸಬೇಕೆಂದು ಹೇಳಿದರು.
ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ, ವರದಿಯಂತೆ ಈಗಾಗಲೇ ಇತರ ಸಮುದಾಯದ ಅಭಿವೃದ್ಧಿಗೆ ಮಂಡಳಿ ರಚಿಸಿದೆ, ನದಾಫ್ ಸಮುದಾಯವೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ, ಈ ಕೂಡಲೇ ಮಂಡಳಿ ರಚಿಸಿ ೨೦ ಕೋಟಿ ರೂ. ಅನುದಾನ ನೀಡಬೇಕು, ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಅನಿರ್ದಿಷಾವಧಿ ಧರಣಿ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಿಬೂಬ್ ಅಲಿ ನದಾಫ್, ಉಮರ್ ನದಾಫ್, ಯುಸೂಫ್, ಅಮೀನೂದ್ದೀನ್, ಮಹಿಮೂದ್ ನದಾಫ್, ಇಸ್ಮಾಯಿಲ್, ಮುಸ್ತಫಾ, ಅಬ್ದುಲ್ ಹಮೀದ್, ನಬೀ ಯಡ್ರಾಮಿ, ಮಶಾಕ್ ನದಾಫ್, ಆದಾಮ್, ರಸೂಲ್ಸಾಬ್ ನದಾಫ್, ಜಾಕೀರ್ ನದಾಫ್ ಸೇರಿದಂತೆ ಸಮುದಾಯದ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.