ಕಲಬುರಗಿ: ರೈತರು ಬೆಳೆದ ತೊಗರಿ ಖರೀದಿ ಮಾಡಲು ಸರಕಾರ ಮೀನಮೇಷ ಮಾಡುತ್ತಿರುವುದಕ್ಕೆ ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆಕ್ರೋಶ ವ್ಯಕ್ತಪಡಿಸಿ, ಶೀಘ್ರ ತೊಗರಿ ಖರೀದಿ ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮಳೆ ಬಂದು ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಾಗಿ ಇದ್ದ ಬದ್ದ ತೊಗರಿ ಬೆಳೆ ಮಾರಾಟ ಮಾಡಲು ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮುಂಗಾರು ಬೆಳೆಗಳು ಭಾರಿ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದ್ದು ಜೀವನೋಪಾಯಕ್ಕೆ ತೊಗರಿ ಬೆಳೆ ಒಂದೇ ಆಸರೆಯಾಗಿದ್ದು, ಸರಕಾರ ಮಾತ್ರ ಖರೀದಿಸಲು ವಿಳಂಬ ಮಾಡುತ್ತಿದೆ ಎಂದು ಅಸಮಧಾನ ಹೋರಹಾಕಿದ್ದಾರೆ.
ತೊಗರಿ ಬೆಳೆಯುವ ನಮ್ಮ ಪ್ರದೇಶದಲ್ಲಿ ಈಗಾಗಲೇ ಬಹುತೇಕ ತೊಗರಿ ರಾಶಿಯಾಗಿ ರೈತರು ಸರ್ಕಾರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಖರೀದಿ ನೋಂದಣಿ ಕಾರ್ಯವೂ ಪೂರ್ಣಗೊಂಡಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಆದರೆ ಇನ್ನುವರೆಗೂ ನೋಂದಣಿ ಆಗಿರುವ ತೊಗರಿ ಖರೀದಿ ಪ್ರಾರಂಭಿಸಿಲ್ಲ. ರಾಶಿ ಮುಗಿದು ಹೋಗಿ ತೊಗರಿ ಮೂಟೆಗಳನ್ನು ಮನೆಯಲ್ಲಿ ಶೇಖರಿಸಿಟ್ಟಿರುವ ರೈತರು ತೊಗರಿ ಖರೀದಿ ಆರಂಭಕ್ಕೆ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೇ ಸರಕಾರ ಪ್ರತಿ ಕ್ವಿಂಟಾಲ್ ಗೆ 8000 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಮಾಡುವಂತೆ ಅವರು ಆಗ್ರಹಿಸಿದ್ದಾರೆ.