ಕಲಬುರಗಿ: ಕೇಂದ್ರ ಸರಕಾರದ ನೂತನ ರೈತ ಮತ್ತು ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ನಗರದ ಜಗತ್ ಸರ್ಕಲ್ ಬಳಿಯಲ್ಲಿ ಪ್ರತಿಭಟನಾ ಧರಣಿ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಬಿಜೆಪಿಗೆ ರೈತರು, ಕಾರ್ಮಿಕರು ಹಾಗೂ ಬಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸರ್ಕಾರಗಳು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ, ಕಾರ್ಪೂರೆಟ್ ಕಂಪನಿಗಳಿಗೆ, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಪ್ರಧಾನಿ ಮೋದಿಯವರು ಸುಗ್ರೀವಾಜ್ಞೆ ಮೂಲಕ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವರ ಕೃಷಿ ವಿರೋಧಿ ನಡೆಯಿಂದ ರೈತ ಕುಲ?ತಬ್ಬಲಿಯಾಗುವ ದುಸ್ಥಿತಿ ಬರಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು,.
ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತ ಸಮುದಾಯಕ್ಕೆ ಕೊರೊನಾ ಸೋಂಕಿಗಿಂತಲೂ ದೊಡ್ಡ ಆಘಾತ ನೀಡಿದೆ. ರೈತರ ಮನೆ ಹಾಳು ಮಾಡಲು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಈ ಕಾಯ್ದೆಗಳಿಗೆ ರೈತರ ಸಂಪೂರ್ಣ ವಿರೋಧವಿದ್ದು, ಕೇಂದ್ರದಲ್ಲಿ ಇರುವುದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಜಾಗತಿಕವಾಗಿ ಚರ್ಚೆಯಾಗುತ್ತಿದೆ. ಹಲವು ದೇಶಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ. ಆದರೆ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಧಾನಿ ಮೋದಿ ಸರ್ವಾಧಿಕಾರಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ನ್ಯಾಯವಾದಿ ತಾಹಿರ್ ಹುಸೇನ್ ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ಪರಿಣಿತರು. ಚುನಾವಣೆಗೆ ಮುನ್ನ ನೀಡಿರುವ ಯಾವುದೇ ಭರವಸೆ ಈಡೇರಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಕುರಿತಾಗಿ ಸ್ವಾಮಿನಾಥನ್ ವರದಿ ಬಗ್ಗೆ ಚಕಾರವಿಲ್ಲ. ಕೃಷಿ ಕಾಯ್ದೆ ತಿದ್ದುಪಡಿ ಮಾಡುವುದಾದರೆ, ಸ್ವಾಮಿನಾಥನ್ ವರದಿಯಂತೆ ಪ್ರತಿವರ್ಷ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದರು.
ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಲಾಕ್ ಡೌನ್ ನಡುವೆ ತರಾತುರಿಯಲ್ಲಿ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ರೈತರು ಎರಡು ತಿಂಗಳಿಂದ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ಅನೇಕ ರೈತರು ಜೀವ ಕಳೆದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಒಂದು ಬಾರಿ ಸಹ ಮಾತನಾಡಿಲ್ಲ ಎಂದರು.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತ್ರಿಪಡಿಸಬೇಕು. ಸಂಕಷ್ಟದಲ್ಲಿರುವ ರೈತ ಕುಲವನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ’ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಲೀಂ ಅಹಮದ್ ಚಿತಾಪುರ ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ರೈತರ ಹೋರಾಟಕ್ಕೆ ಜಯವಾಗಿದೆ. ಆದರೆ, ತಜ್ಞರ ಸಮಿತಿ ರಚಿಸಿರುವುದು ಕುರಿಯನ್ನು ಕಾಯಲು ತೋಳವನ್ನು ಕಾವಲಿಗೆ ಇಟ್ಟಂತೆ ಆಗಿದೆ. ಆದ್ದರಿಂದ ಈ ಸಮಿತಿಯನ್ನು ರದ್ದುಗೊಳಿಸಿ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಜೀಜ್ ಜಾಗಿರ್ದಾರ್, ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಣ್ಣ ಜಿ ಚಕ್ರ, ಪ್ರಧಾನ ಕಾರ್ಯದರ್ಶಿ ಮೋಬಿನ್ ಅಹ್ಮದ್ , ಅಜೀಜ್ ಪಟೇಲ್ ಯಾಳವಾರ್, ಮುನೀರ್ ಹಾಸ್ಮಿ, ಸಲೀಂ ಸದರಿ ಸೇರಿದಂತೆ ಮುಂತಾದವರು ಇದ್ದರು.