ಬೆಳಗಾವಿ: ಇಲ್ಲಿನ ರುದ್ರಾಕ್ಷಿ ಮಠದ ಎರಡು ದಿನಗಳ ಲಿಂಗಾಯತ ಮಠಾಧೀಶರ ಚಿಂತನಾ ಶಿಬಿರದಲ್ಲಿ ಸಮಾವೇಶಗೊಂಡ ನಾಡಿನ ಮಠಾಧೀಶರೆಲ್ಲ ಸೇರಿ ಲಿಂಗಾಯತ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು.
ಹನ್ನೆರಡನೆಯ ಶತಮಾನದ ಬಸವಣ್ಣನವರನ್ನೆ ಗುರುವೆಂದು ಒಪ್ಪಿಕೊಳ್ಳುವುದು. ಶರಣರು ಬರೆದ ವಚನಗಳೇ ಧರ್ಮಗ್ರಂಥವೆಂದು ಸಾರಿ ಹೇಳಿತು. ಸನಾತನ ಪರಂಪರೆ,ಬಸವ ಪರಂಪರೆ ತುಂಬಾ ವಿಭಿನ್ನ. ಇದನ್ನು ಅರಿಯದೆ ಲಿಂಗಾಯತ ಮಠಾಧೀಶರು ವೈದಿಕರಣಗೊಂಡ ಬಗ್ಗೆ ಚಿಂತಿಸಿ, ಚರ್ಚಿಸಿ ತೀರ್ಮಾನಿಸಲಾಯಿತು ಎಂದು ಗದುಗಿನ ತೋಂಟದಾರ್ಯ ಮಠದ ಡಾ. ಪೂಜ್ಯ ಶ್ರೀ. ಸಿದ್ದರಾಮ ಸ್ವಾಮೀಜಿ ಬಸವಮಾರ್ಗಕ್ಕೆ ತಿಳಿಸಿದರು.
ಇಲ್ಲಿಯವರೆಗೂ ಮಠಾಧೀಶರು ಇತಿಹಾಸದ ಸತ್ಯವನ್ನು ಅರಿಯದೆ ಆಚರಿಸಿದ ವೈದಿಕ ಆಚರಣೆಗಳು ಲಿಂಗಾಯತ ತತ್ವಕ್ಕೆ ಚ್ಯುತಿ ತರುವಂತಿದ್ದವು. ಇದಕ್ಕೆ ಕಾರಣ ವಚನ ಪ್ರಜ್ಞೆ ಇಲ್ಲದಿರುವುದೆ ಆಗಿತ್ತು ಎಂದವರು ಸ್ಪಷ್ಟ ಪಡಿಸಿದರು.
ಹಾನಗಲ್ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಸಹ ಅಂದಿನ ಕಾಲಕ್ಕೆ ಅನಿವಾರ್ಯವಾದ ಶಿವಯೋಗ ಮಂದಿರವನ್ನು ಸ್ಥಾಪಿಸಿದರ ಹಿಂದೆ ಸದುದ್ದೇಶವೆ ಇತ್ತು. ಆಗ ವಚನ ಸಾಹಿತ್ಯ ಈಗಿನಷ್ಟು ವ್ಯಾಪಕವಾಗಿ ಪಸರಿಸಿರಲಿಲ್ಲ. ಅದ್ದರಿಂದ ಹಲವು ಗೊಂದಲಗಳು ಹಾಗೇ ಉಳಿದು ಬಂದವು. ಲಿಂಗಾಯತರು ಹಾಗೂ ಮಠಾಧೀಶರು ಅನಿವಾರ್ಯವಾಗಿ ಬೇರೊಂದು ಪಥದಲ್ಲಿ ಸಾಗಿ ಇಲ್ಲಿಯವರೆಗೆ ನಡೆದು ಬರಬೇಕಾಯಿತು.
ಆಗಮಗಳಲ್ಲಿ, ವೇದಗಳಲ್ಲಿ ಎಲ್ಲಿಯೂ ಇಲ್ಲದ ವೀರಶೈವ ಕೆಲವರ ಪಿತೂರಿಯಿಂದ ನಮ್ಮ ಸಮಾಜವನ್ನು ಹೊಕ್ಕು ಶರಣ ಸಂಪ್ರದಾಯವನ್ನು ಅರಿಯದಂತೆ ಮಾಡಲು ಅದು ಅಡ್ಡಿಯಾಯಿತು ಎಂದು ಸಮಾವೇಶ ಅಭಿಪ್ರಾಯ ಪಟ್ಟಿತು.
ಶರಣರ ಚಿಂತನೆಗಳು ಇಂದು ಜಗತ್ತನ್ನು ಆಳುತ್ತವೆ. ಯಾವ ವ್ಯಕ್ತಿಯೂ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಪೂರ್ವದಲ್ಲಿ ನಿರ್ಧರಿಸಿರುವುದಿಲ್ಲ. ಆದ್ದರಿಂದ ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ವವನ್ನು ಮುಂದಿಟ್ಟುಕೊಂಡು ೭೭೦ ಜನ ಅಮರಗಣಂಗಳ ಆಶಯಗಳನ್ನು ಮುಂದಿಟ್ಟುಕೊಂಡು ನಡೆಯಲೇ ಬೇಕಾದ ಸಂದರ್ಭ ಇದಾಗಿದೆ ಎಂದು ಸಭೆ ಒಕ್ಕೂರಲಿನಲ್ಲಿ ತೀರ್ಮಾನಿಸಿತು.
ಇನ್ನು ಮುಂದಿನಿಂದ ವಚನ ಸಾಹಿತ್ಯ ತೋರುವ ಹಾದಿಯಲ್ಲಿ ನಡೆದು ಲಿಂಗಾಯತ ಜನಗಳ ( ಭಕ್ತರ) ಧಾರ್ಮಿಕ ಆಚರಣೆಗಳನ್ನು ಅನುಚಾನವಾಗಿ ಜಾರಿಗೆ ತರಲು ಸಭೆ ಸರ್ವ ಸಮ್ಮತದ ತೀರ್ಮಾನಕ್ಕೆ ಬರಲಾಯಿತು. ಶರಣ ಅಂಬಿಗರ ಚೌಡಯ್ಯ,ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಹಡಪದ ಅಪ್ಪಣ್ಣ, ಡೋಹಾರ ಕಕ್ಕಯ್ಯ ಮಾದಾರ ಚೆನ್ನಯ್ಯ ಮುಂತಾದ ಶರಣರ ನಿಲುವು ಒಲವುಗಳ ಆಶಕ್ಕೆ ಧಕ್ಕೆ ತಾರದೆ ಮುನ್ನಡೆಯಬೇಕೆಂದು ಅದು ತೀರ್ಮಾನಿಸಿತು.
ಲಿಂಗಾಯತರಲ್ಲಿ ಇತಿಹಾಸದ ಪ್ರಜ್ಞೆ ಇಲ್ಲದೆ ಹುಟ್ಟಿಕೊಂಡ ವಿವಿಧ ಒಳ ಪಂಗಡಗಳ ಕ್ರೂಢಿಕರಣದ ಮೂಲಕ ನಿಜ ಲಿಂಗಾಯತರಾಗಲು ಅನುವು ಮಾಡಿಕೊಡುವುದಾಗಿ ಅದು ಘೋಷಿಸಿತು.
ಚಿಂತನಾ ಶಿಬಿರದಲ್ಲಿ ನಾಡಿನ ಎಲ್ಲಾ ಮಠಾಧೀಶರು ಶಿಬಿರಾರ್ಥಿಯಾಗಿ ಸಮಾವೇಶಗೊಂಡಿದ್ದರು. ಉಪನ್ಯಾಸಕ್ಕಾಗಿ ಡಾ. ಎಸ್. ಎಂ. ಜಾಮದಾರ, ಡಾ.ವೀರಣ್ಣ ರಾಜೂರ, ಡಾ. ಜೆ.ಎಸ್.ಪಾಟೀಲ ಹಾಗೂ ವಿಶ್ವಾರಾಧ್ಯ ಸತ್ಯಂಪೇಟೆ ಆಗಮಿಸಿದ್ದರು.
ಚಿಂತನಾ ಶಿಬಿರದ ಕೊನೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಮೂರು ವರ್ಷಗಳ ಅವಧಿಗೆ ಭಾಲ್ಕಿಯ ಡಾ. ಬಸವಲಿಂಗ ಪಟ್ಡದ್ದೇವರನ್ನು ಅಧ್ಯಕ್ಷರೆಂದು ಆಯ್ಕೆ ಮಾಡಲಾಯಿತು. ೨೫ ಜನ ಲಿಂಗಾಯತ ಒಳ ಪಂಗಡಗಳ ಮಠಾಧೀಶರು, ಕಾರ್ಯಕಾರಿ ಮಂಡಳಿಯನ್ನು ರಚಿಸುವ ಹೊಣೆಯನ್ನು ಅಧ್ಯಕ್ಷರ ವಿವೇಚನೆಗೆ ಬಿಡಲಾಯಿತು.