ಕಲಬುರಗಿ: ಒಂದೇ ಊರಿನ ಅಕ್ಕ, ಪಕ್ಕದ ಮನೆಯ ಪ್ರೇಮಿಗಳು ಊರು ಬಿಟ್ಟು ಪರಾರಿಯಾಗುತ್ತಿದ್ದ ಸಮಯದಲ್ಲಿ ದ್ವಿಚಕ್ರವಾಹನ ಅಪಘಾತವಾಗಿ ಯುವತಿ ಸ್ಥಳದಲ್ಲಿಯೇ ಅಸುನೀಗಿ, ಯುವಕ ಗಾಯಗೊಂಡ ಘಟನೆ ಜಿಲ್ಲೆಯ ಕಾಳಗಿ ತಾಲ್ಲೂಕಿನ ಗೋಟೂರ್- ಮಾಳಗಿ ಕ್ರಾಸ್ ಬಳಿ ವರದಿಯಾಗಿದೆ.
ಮೃತ ಯುವತಿಯು ಪದವಿ ಪೂರ್ವ ಕಾಲೇಜು ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಮೃತಳನ್ನು ಶೋಭಾ (21) ಹಾಗೂ ಗಾಯಾಳುವನ್ನು ಪ್ರವೀಣ್ (24) ಎಂದು ಗುರುತಿಸಲಾಗಿದೆ.
ಯುವತಿ ಹಾಗೂ ಯುವಕ ಇಬ್ಬರೂ ಕಾಳಗಿ ಪಟ್ಟಣದ ಒಂದೇ ಬಡಾವಣೆಯ ಅಕ್ಕ, ಪಕ್ಕದ ನಿವಾಸಿಗಳು. ಇಬ್ಬರು ಪರಸ್ಪರ ಪ್ರೀತಿಸಿ ಊರು ಬಿಟ್ಟು ದ್ವಿಚಕ್ರವಾಹನದ ಮೇಲೆ ಹೋಗುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲಾತಿಗಳು ಪತ್ತೆಯಾಗಿವೆ. ಇಬ್ಬರೂ ಬೇರೆ ಊರಿಗೆ ಪಲಾಯನ ಮಾಡುತ್ತಿರುವಾಗ ಈ ಅವಘಡ ಸಂಭವಿಸಿದೆ.
ಈ ನಡುವೆ ಯುವತಿಯನ್ನು ಅಪಹರಿಸಿ ಕೊಲೆ ಮಾಡಿರಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸಧ್ಯ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಯುವಕನಿಗೆ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಕಾಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.