ಶಹಾಬಾದ: ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದಿಗೂ ಕೂಡ ಮತದಾನದ ಜಾಗೃತಿ ಮೂಡಿಸುತ್ತಿರುವದು ವಿಷಾಧದ ಸಂಗತಿಯಾಗಿದೆ ಎಂದು ನಗರದ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಎಂದರು.
ಅವರು ನಗರದ ನ್ಯಾಯಾಲಯದಲ್ಲಿ ತಾಲೂಕಾ ಸೇವಾ ಸಮಿತಿ, ಚಿತ್ತಾಪೂರ ಮತ್ತು ನ್ಯಾಯಾವಾದಿಗಳ ಸಂಘದ ಸಂಯುಕ್ತಾಶ್ರದಲ್ಲಿ ಆಯೋಜಿಸಲಾದ ಮತದಾರರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಮತದಾನದ ಮಹತ್ವವನ್ನು ಮತದಾರರು ಅರಿತಿಕೊಂಡು ಚುನಾವಣೆಯಲ್ಲಿ ನಿರ್ಭಿತರಾಗಿ ಮತ ಚಲಾಯಿಸಬೇಕು. ೨೦೧೧ ಜ.೨೫ ರಿಂದ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಮತದಾನದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು ಸಾಮಾಜಿಕ ಏಳಿಗೆಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಯಾವುದೇ ಆಮಿಷುಗಳಿಗೆ ಒಳಗಾಗದೇ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಅಲ್ಲದೇ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಂಡರೆ ಸಮಾಜದಲ್ಲಿ ಉತ್ತಮ ರೀತಿಯಿಂದ ಬದುಕಲು ಸಾಧ್ಯ ಇಂದಿನ ಸಮಾಜದಲ್ಲಿ ಬಹುತೇಕ ಜನರಿಗೆ ಕಾನೂನಿನ ತಿಳುವಳಿಕೆ ಇಲ್ಲದೇ ಇರುವುದರಿಂದ ಸಾಕಷ್ಟು ಅಪರಾಧಗಳು ಜರುಗುತ್ತಿವೆ. ಕಾನೂನಿನ ಅರಿವು ಮೂಡಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ.ಆದ್ದರಿಂದ ಕಾನೂನಿನ ಅರಿವು ಎಲ್ಲರಿಗೂ ನೀಡುವುದು ನಮ್ಮೆಲ್ಲರ ಅಗತ್ಯ ಎಂದರು.
ಮತದಾರರ ದಿನಾಚರಣೆ ಕುರಿತು ವಕೀಲರಾದ ಈರಣ್ಣ ಇಂಗಳಗೇರ ಹಾಗೂ ಕಾನೂನು ಅರಿವು ಮತ್ತು ನೆರವು ಕುರಿತು ರಘುವೀರಸಿಂಗ ಠಾಕೂರ ಉಪನ್ಯಾಸ ನೀಡಿದರು.
ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಅತುಲ್.ಎಂ.ಯಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ವಕೀಲರಾದ ಶಶಿಕಾಂತ ಶಿಂಧೆ, ತಿಮ್ಮಣ್ಣ ಮಾನೆ, ಉಮೇಶ ಪೊಚ್ಚಟ್ಟಿ, ಉಮಾ ಮಲಕೂಡ, ಜ್ಯೋತಿ,ನಾಗೇಶ ಧನ್ನೇಕರ್,ರಮೇಶ ರಾಠೋಡ ಇತರರು ಇದ್ದರು.