ಸುರಪುರ: ಬೇವಿನಾಳ ಗ್ರಾಮದಲ್ಲಿ ಇದೇ ತಿಂಗಳು ೧೧ನೇ ತಾರೀಖು ಸಂಜೆ ಮರೆಪ್ಪ ಎಂಬ ವಾಲ್ಮೀಕಿ ಸಮುದಾಯದ ವ್ಯಕ್ತಿಯನ್ನು ಕಾದ ಎಣ್ಣೆಗೆ ತಳ್ಳಿ ಆತನ ಸಾವಿಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಬೇಟೆಗಾರ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ವತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಮರೆಪ್ಪನ ಸಾವಿಗೆ ಕಾರಣರಾದ ಎಲ್ಲಾ ಆರೋಪಿಗಳನ್ನು ಬಂಧಿಸದೆ ಕೇವಲ ಕಾಟಾಚಾರಕ್ಕೆ ಯಾರೊ ಇಬ್ಬರನ್ನು ಬಂಧಿಸಿದರೆ ಸಾಲದು,ಎಲ್ಲಾ ನಾಲ್ಕು ಜನರ ಬಂಧನವಾಗಬೇಕು ಮತ್ತು ಇಡೀ ಕುಟುಂಬದ ಆಧಾರಸ್ಥಂಭವಾಗಿದ್ದ ಮರೆಪ್ಪನ ಸಾವಿನಿಂದ ಈಗ ಕುಟುಂಬ ತೀವ್ರ ತೊಂದರೆಗೆ ಸಿಲುಕಿದ್ದು,ಈ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರು ಘಟನೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದರು,ನಂತರ ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಾಧ್ಯಕ್ಷ ವೆಂಕೋಬದೊರೆ ಬೊಮ್ಮನಹಳ್ಳಿ ರಮೇಶ ದೊರೆ ಆಲ್ದಾಳ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ ಮಾರ್ಥಾಂಡಪ್ಪ ದೇವರಗೋನಾಲ ಕನಕಾಚಲ ಯಡಿಯಾಪುರ ದೇವಿಂದ್ರಪ್ಪ ಬೇವಿನಾಳ ಭೀಮನಗೌಡ ಬೇವಿನಾಳ ಬಸವರಾಜ ಮಾಲಿ ಪಾಟೀಲ್ ವಿಜಯಕುಮಾರ ಬೇವಿನಾಳ ಶರಣಪ್ಪ ಬೇವಿನಾಳ ಮಲ್ಲಯ್ಯ ಬೇವಿನಾಳ ಸಾಹೇಬಗೌಡ ಸೇರಿದಂತೆ ಮೃತ ಮರೆಪ್ಪನ ಕುಟುಂಬಸ್ಥರು ಹಾಗು ಅನೇಕ ಜನ ಮಹಿಳೆಯರಿದ್ದರು.