ಶಹಾಬಾದ: ಮಕ್ಕಳನ್ನು ಕಾಡುವ ಪೋಲಿಯೋ ರೋಗ ಅವರ ಭವಿಷ್ಯವನ್ನೇ ಹಾಳು ಮಾಡುವ ಸಾಧ್ಯತೆ ಇರುವ ಕಾರಣ ಮುಂಜಾಗೃತ ಕ್ರಮವಾಗಿ ಪೋಷಕರು ತಮ್ಮ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಹೀಮ್ ಹೇಳಿದರು.
ಅವರು ರವಿವಾರ ಜಿಲ್ಲಾಡಳಿತ, ಜಿಪಂ ಕಲಬುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಣ್ಣ ಮಕ್ಕಳನ್ನು ಅತ್ಯಂತ ಭಯಾನಕವಾಗಿ ಕಾಡುವ ಈ ಪೋಲಿಯೋ ಕಾಯಿಲೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ.ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರಿಂದ ಅಂಗವೈಕಲ್ಯ ತಡೆಯಬಹುದು.ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ದಂತ ವೈದ್ಯೆ ಡಾ.ಸಂಧ್ಯಾ ರಾಮರಾವ ಮಾತನಾಡಿ,ದೇಶವನ್ನು ಪೋಲಿಯೋ ಮುಕ್ತಗೊಳಿಸಲು ಆರೋಗ್ಯ ಇಲಾಖೆಯ ಮೂಲಕ ಪಲ್ಸ್ ಪೋಲಿಯೋ ಲಸಿಕೆ ಹಾಕುತ್ತಿದೆ. ಪೋಷಕರು, ನಾಗರಿಕರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಲು ಸಹಕಾರ ನೀಡಬೇಕೆಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಿರಿಯ ಆರೋಗ್ಯ ಸಹಾಯಕ ಯೂಸುಫ್ ನಾಕೇದಾರ, ಹದಿಹರೆಯದ ಆಪ್ತಸಮಾಲೋಚಕ ಅಮರೇಶ ಇಟಗಿಕರ್ ಇತರರು ಇದ್ದರು.