ಬೆಂಗಳೂರು:`ಸ್ಟಾರ್ಟ್ ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್’ (ಎಸ್ಯು೨ಎಸ್‌ಇ) ಎನ್ನುವ ಸುಕೊ ಬ್ಯಾಂಕಿನ ವಿಶೇಷ ಸಾಲ ಯೋಜನೆ ಮೂಲಕ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಅತ್ಯುತ್ತಮ ಹೆಜ್ಜೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.
ಬೆಂಗಳೂರು ನಗರದಿಂದ ವರ್ಚುಯಲ್ ಫ್ಲಾಟ್ ಫಾರಂ ಮೂಲಕ ಸುಕೋ ಬ್ಯಾಂಕಿನ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು ಎನ್ನುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. 10 ಲಕ್ಷ ಉದ್ಯೋಗಾವಕಾಶಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ಸ್ಟಾರ್ಟ್ ಅಪ್‌ಗಳ ಉದ್ಯಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಅದಕ್ಕೆ ಬೇಕಾದ ತರಬೇತಿ ಹಾಗೂ ಉದ್ಯಮ ಪ್ರಾರಂಭಿಸಬೇಕು ಎನ್ನುವವರಿಗೆ ಹೊಸ ಯೋಜನೆಗಳನ್ನು ತಲುಪಿಸುವುದು ಅತ್ಯುತ್ತಮ ಕಲ್ಪನೆಯಾಗಿದೆ. ಇದರಿಂದ ಸ್ಟಾರ್ಟ್ ಅಪ್‌ಗಳ ವ್ಯವಹಾರ ಹೆಚ್ಚಾಗುವುದಲ್ಲದೆ, ಗ್ರಾಮೀಣ ಪ್ರದೇಶದ ಹಾಗೂ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಇದು ಅತ್ಯುತ್ತಮ ಯೋಜನೆಯಾಗಿದ್ದು ರಾಜ್ಯ ಸರಕಾರದ ವತಿಯಿಂದ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಸುಕೋ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ, ಮನೋಹರ್ ಮಸ್ಕಿ ಮಾತನಾಡಿ, ನಮ್ಮ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಹೊಸ ರೀತಿಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. 12 ಜಿಲ್ಲೆಗಳಲ್ಲಿ ಬ್ಯಾಂಕಿನ ಶಾಖೆಗಳಿದ್ದು, ಕರೋನಾ ಸಂಕಷ್ಟ ಕಾಲದಲ್ಲಿ ಸಣ್ಣ ಸಾಲಗಳನ್ನು ನೀಡುವ ಜನರ ಸಹಾಯಕ್ಕೆ ಮುಂದಾಗಿದ್ದೆವು. ಸ್ಟಾರ್ಟ್ ಅಪ್ ಕಂಪನಿಗಳಿಗೆ ಹಣಕಾಸಿನ ಸಹಾಯ ಒದಗಿಸಿ, ಅವರ ಮೂಲಕ ಅವರ ಉತ್ಪನ್ನಗಳನ್ನು ಬಳಸುವವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ನಾಡಿನ ಜನರಿಗೆ ಆರೋಗ್ಯ ಸೇವೆಗಳು, ಆರೋಗ್ಯಯುತ ಆಹಾರ ಹಾಗೂ ಪರಿಸರ ಸಂರಕ್ಷಣೆಗೆ ಸಣ್ಣ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ ಅಧ್ಯಕ್ಷ, ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಮತನಾಡಿ, ನಾಡಿನ ಯುವ ಜನರು ನೌಕರಿಗಳಿಗಾಗಿ ಹುಡುಕಾಡದೆ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಆರಂಭಿಸಿ ತಾವೂ ಬೆಳದು ಇತರ ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕೆಂದು ಕರೆ ನೀಡಿದರು.
ಸುಕೋ ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿಯವರು ಮಾತನಾಡಿ, ಸುಕೋ ಬ್ಯಾಂಕು ಯಾವಾಗಲೂ ವಿಶಿಷ್ಟ ಹಾಗೂ ವಿನೂತನ ಗ್ರಾಹಕ ಸ್ನೇಹಿ ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪುವಂತೆ ಮಾಡುತ್ತಿದೆ. ತಂತ್ರಜ್ಞಾನವನ್ನು ಬಳಸುವಲ್ಲಿ ಸಹಕಾರಿ ಕ್ಷೇತ್ರದಲ್ಲಿ ಯಾವಾಗಲೂ ಮುಂಚೂಣಿ ಬ್ಯಾಂಕಾಗಿ ಅಭಿವೃದ್ದಿ ಹೊಂದುತ್ತಿದೆ. ಇಂದಿನ ಆನ್‌ಲೈನ್ ಮೂಲಕ ಯೋಜನೆ ಪ್ರಾರಂಭಿಸಿದ್ದು ಇದಕ್ಕೆ ಉದಾಹರಣೆಯಾಗಿದೆ. ಈ ವಿಶೇಷ ಯೋಜನೆಯಿಂದ ಸುಮಾರು ೫೦೦ ಕ್ಕೂ ಹೆಚ್ಚಿನ ಯುವಕ ಯುವತಿಯರ ಸ್ವಾವಲಂಬನೆಯ ಬದುಕಿಗೆ ನೆರವಾಗಲಿದೆ. `ಸ್ವ ಉದ್ಯೋಗಕ್ಕಾಗಿ ಸ್ಟಾರ್ಟ್ಅಪ್’ ಯೋಜನೆಯನ್ನು ಸುಕೋ ಬ್ಯಾಂಕ್ ರೂಪಿಸಿರುವ `ಸ್ಟಾರ್ಟ್ ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್’ ವಿಶೇಷ ಸಾಲ ಯೋಜನೆ ಅಡಿಯಲ್ಲಿ ಸಾಲ ನೀಡುವ ಪ್ರಕ್ರಿಯನ್ನು ಆರಂಭಿಸಲಾಗುತ್ತದೆ ಎಂದು ಮೋಹಿತ ಮಸ್ಕಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂಎನ್‌ಎಸ್ ಸಂಸ್ಥೆಯ ನೀರಾ ಪ್ರಾಂಚೈಸಿ ನವೀನ್ ಶೆಟ್ಟಿ ಅವರಿಗೆ ಯೋಜನೆಯ ಮೊದಲ ಫಲಾನುಭವಿಯಾಗಿ ಪ್ರಮಾಣ ಪತ್ರವನ್ನು ನೀಡಲಾಯಿತು. ಬನಶ್ರೀ ಸಿಸ್ಟಂ ಪ್ರೈ ಲಿ ನ ಬ್ಯಾಟ್ – ಫ್ಲೈ ಪ್ರಾಂಚೈಸಿಯ ಮೊದಲ ಫಲಾನುಭವಿಯಾಗಿ ಸುನೀಲ್ ಕುಮಾರ್ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಬೆಂಗಳೂರಿನ ವೆನ್ಫೈನ್ಸ್ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಸಂಹಿತಾ ಉತ್ಪನ್ನದ ಮೊದಲ ಫಲಾನುಭವಿಯಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಲಾಯಿತು.