ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಉಂಟಾದ ಪ್ರವಾಹದ ಪರಿಹಾರದಲ್ಲಿ ಆದ ಅನ್ಯಾಯವನ್ನು ಖಂಡಿಸಿ ಹಾಗೂ ಕರ್ತವ್ಯ ಲೋಪ ಎಸಗಿದ ಹೊನಗುಂಟಾ ಗ್ರಾಮ ಲೆಕ್ಕಿಗನನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಸೋಮವಾರ ದಸಂಸ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯಿಂದ ಸೋಮವಾರ ನಗರದ ಪ್ರವಾಸಿ ಮಂದಿರದಿಂದ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ಹೊನಗುಂಟಾ ಗ್ರಾಮದಲ್ಲಿ ಅನೇಕ ಮನೆಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ದವಸ ಧಾನ್ಯಗಳು ಹಾಗೂ ಇತರ ಸಾಮಾನುಗಳು ಹಾಳಾಗಿ ಹೋಗಿತ್ತು.ಆದರೆ ಜಲಾವೃತಗೊಂಡ ಮನೆಗಳನ್ನು ಬಿಟ್ಟು ಗ್ರಾಮದ ಮುಖಂಡರ ಮಾತು ಕೇಳಿ ಜಲಾವೃತಗೊಳ್ಳದ ಮನೆಗಳಿಗೆ ಪರಿಹಾರ ನೀಡಿದ್ದಾರೆ.ಅಲ್ಲದೇ ಗ್ರಾಮದ ಎತ್ತರದ ಪ್ರದೇಶದ ಮನೆಗಳಿಗೆ ಪ್ರವಾಹದ ನೀರು ಬರೋದೆ ಇಲ್ಲ.ಅಂತಹ ಮನೆಗಳಿಗೂ ಪರಿಹಾರ ನೀಡಿರುವುದು ಮಾತ್ರ ಅಪರಾಧ. ಶಹಾಬಾದ ನಗರದಲ್ಲಿಯೇ ಕುಳಿತು ಯಾರೋ ಮಾತು ಕೇಳಿ ಮನಸ್ಸಿಗೆ ಬಂದಂತೆ ಪಟ್ಟಿ ಮಾಡಿದ್ದಾರೆ. ಈಗಾಗಲೇ ಗ್ರಾಮ ಲೆಕ್ಕಿಗ ಹಾಗೂ ಪಿಡಿಓ ಪ್ರವಾಹ ಪೀಡಿತ ಮನೆಗಳಿಗೆ ಬೇಟಿ ನೀಡಿದ್ದೆವೆ ಎಂದು ಹೇಳಿದ್ದಾರೆ.
ಆದರೆ ಕನಿ? ಪಕ್ಷ ಜಲಾವೃತಗೊಂಡ ಮನೆಗಳಿಗೆ ಬೇಟಿಯೂ ನೀಡದೇ, ಪ್ರವಾಹಕ್ಕೆ ಒಳಗಾಗದ ಮನೆಗಳಿಗೂ ಪರಿಹಾರ ನೀಡಿದ್ದಾರೆ.ಆದರೆ ಪ್ರವಾಹಕ್ಕೆ ಒಳಗಾದ ಮನೆಗಳಿಗೆ ಪರಿಹಾರ ಬಂದಿಲ್ಲ.ಆದ್ದರಿಂದ ಕರ್ತವ್ಯ ಲೋಪ ಎಸಗಿದ ಗ್ರಾಮ ಲೆಕ್ಕಿಗನನ್ನು ಹೊನಗುಂಟಾ ಗ್ರಾಮದಿಂದ ವರ್ಗಾವಣೆಗೊಳಿಸಬೇಕೆಂದು ಆಗ್ರಹಿಸಿದರಲ್ಲದೇ, ಪ್ರವಾಹಕ್ಕೆ ಒಳಗಾದ ಮನೆಗಳಿಗೆ ಕೂಡಲೇ ಪರಿಹಾರ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ದಸಂಸ ಉಪ-ವಿಭಾಗೀಯ ಸಂಚಾಲಕ ಉದಯಕುಮಾರ ಸಾಗರ,ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ದಸಂಸ ನಗರ ಸಂಚಾಲಕ ಮಲ್ಲಣ್ಣ ಮಸ್ಕಿ, ತಾಲೂಕಾ ಸಂಚಾಕ ಶಿವರುದ್ರ ಗಿರೇನೂರ, ಹೊನಗುಂಟಾ ಸಂಚಾಲಕ ರಾಘವೇಂದ್ರ ಗುಡೂರ,, ಮಲ್ಲಿಕಾರ್ಜುನ ಹಳ್ಳಿ, ಹೊನ್ನೆಪ್ಪ.ಕೆ, ಮಲ್ಕಣ್ಣ ಮುದ್ದಾ ಸೇರಿದಂತೆ ಅನೇಕ ಜನರು ಹಾಜರಿದ್ದರು.