ಕಲಬುರಗಿ: ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಡ್ಜರ್ ಮೆಂಟೆನೆನ್ಸ್ ಹಾಗೂ ಮಾಪಕ ಓದುಗರನ್ನು ಖಾಯಂಗೊಳಿಸದೇ ಹೋದಲ್ಲಿ ಸಾವೇ ದಾರಿಯಾಗಲಿದೆ ಎಂದು ಕಂಪೆನಿ ಸಿಬ್ಬಂದಿ ಶಿವಲಿಂಗ್ ತಂದೆ ಮೈಲಾರಿ ಇಲ್ಲಿ ಎಚ್ಚರಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ೧೦೩ ಸಿಬ್ಬಂದಿಗಳ ಸೇವೆ ಖಾಯಂಗೊಳಿಸದೇ ಹೋದಲ್ಲಿ ಆತ್ಮಾಹುತಿಗೆ ದಾರಿಯಾಗಲಿದೆ ಎಂದರು.
ಕೆಇಬಿ, ಕೆಪಿಟಿಸಿಎಲ್ ಮತ್ತು ಜೆಸ್ಕಾಂನಲ್ಲಿ ಕಳೆದ ೧೯೯೯ರಿಂದ ೨೦೦೮ರವರೆಗೆ ನಿರಂತರವಾಗಿ ಪ್ರತಿ ವರ್ಷ ೨೪೦ ದಿನಗಳಿಗಿಂತಲೂ ಅಧಿಕ ಸೇವೆಯನ್ನು ಸಲ್ಲಿಸಿದ್ದೇವೆ. ಇಂತಹ ಸಿಬ್ಬಂದಿಗಳನ್ನು ಖಾಯಂ ಮಾಡಲು ಬರುತ್ತದೆ. ಈ ಹಿಂದೆ ಮುತ್ತಯ್ಯ ಬಿನ್ ದಿ. ದಾಸಯ್ಯ ಅವರನ್ನು ಎಂ. ಮಹಾದೇವ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾಗ ಖಾಯಂ ಮಾಡಿದ್ದಾರೆ ಎಂದು ಹೇಳಿದ ಅವರು, ಸುಪ್ರಿಂಕೋರ್ಟ್ ಆದೇಶದ ಪ್ರಕಾರವೂ ಸಹ ಖಾಯಂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯ ಕೇವಲ ೬ ಜನ ಮಾಪಕ ಓದುಗರ ಸೇವೆ ಖಾಯಂಗೊಳಿಸಲಾಗಿದೆ. ಉಳಿದ ೫೯ ಲೆಡ್ಜರ್ ಮೆಂಟೆನನ್ಸ್ ವರ್ಕರ್ಸ್ ಹಾಗೂ ೨೬ ಮಾಪಕ ಓದುಗರನ್ನು ಖಾಯಂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಒಬ್ಬರಿಗೆ ನ್ಯಾಯ ಸಿಕ್ಕರೆ ಬಾಧಿತರಿಗೂ ಸಹ ಅನ್ವಯಿಸಬೇಕು ಎಂದಿದೆ. ಅದರಂತೆ ಸೇವೆ ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ೮ ವರ್ಷಗಳಿಂದಲೂ ಬೇಡಿಕೆಯನ್ನು ಮಂಡಿಸಿದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯವಸ್ಥಾಪಕ ನಿರ್ದೇಶಕರು ಒಳ್ಳೆಯವರಾಗಿದ್ದರೂ ಕೆಳ ಹಂತದ ಅಧಿಕಾರಿಗಳು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಆದ್ದರಿಂದ ಸೇವೆ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ದಿಗ್ಗಾಂವಕರ್, ಸಂತೋಷ್ ರೆಡ್ಡಿ, ಸೋಮನಾತ್, ಜೋಸೆಫ್, ಅಬ್ದುಲ್ ರವೂಫ್, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.