ಕಲಬುರಗಿ: ಕರ್ತವ್ಯಲೋಪ ಎಸಗುತ್ತಿರುವ ಕಾಳಗಿ ತಾಲ್ಲೂಕಿನ ಕಲ್ಲಹಿಪ್ಪರಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಾನತ್ತಿಗೊಳಿಸಬೇಕೆಂದು ಒತ್ತಾಯಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಬಿ. ಹಾಗರಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಗನ್ನಾಥ್ ಪಟ್ಟಣಶೆಟ್ಟಿ, ಶರಣು ಖಾನಾಪೂರೆ, ಮಹಿಮೂದ್ ಯಲಗಾರ್, ಬಾಲರಾಜ್ ಕೊನಳ್ಳಿ, ರಜನೀಶ್ ಕೌಂಟೆ, ಪ್ರಭು, ಸಂತೋಷ್ ಪಾಟೀಲ್, ಶಾಂತಕುಮಾರ್, ಆರ್.ಎಸ್. ಪಾಟೀಲ್, ಸಿದ್ದು ಹರಸೂರ್, ಮಹಿಪಾಲ್, ವಿವೇಕ್, ಸಂಗಮೇಶ್, ಗುರುರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಬೈಕ್ ನಡುವೆ ಡಿಕ್ಕಿ ಬೈಕ ಸವಾರನ ಸಾವು
ಪ್ರತಿಭಟನೆಕಾರರು ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಲ್ಲಹಿಪ್ಪರಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯಾಧಿಕಾರಿ ಸೇರಿ ಒಟ್ಟು ಏಳು ಜನ ಸಿಬ್ಬಂದಿಗಳಿದ್ದಾರೆ. ವೈದ್ಯಾಧಿಕಾರಿ ವಾರದಲ್ಲಿ ಎರಡು ದಿನಗಳು ಮಾತ್ರ ಬರುತ್ತಾರೆ. ಅದು ಬೆಳಿಗ್ಗೆ ೧೦ ಗಂಟೆಗೆ ಹಾಜರಿ ಹಾಕಿ ೧೧-೩೦ಕ್ಕೆ ಹೋಗುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು ಹನ್ನೊಂದು ಗ್ರಾಮಗಳು ಬರುತ್ತವೆ. ವೈದ್ಯರು ಇಲ್ಲದೇ ಇರುವುದರಿಂದ ಎಲ್ಲ ಗ್ರಾಮಸ್ಥರು ಹೆಬ್ಬಾಳ್ ಗ್ರಾಮಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ಪರದಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಕುರಿತು ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವು ಆರಂಭವಾಗಿ ನಾಲ್ಕು ವರ್ಷಗಳು ಕಳೆದರೂ ಸಹ ಒಂದೂ ಹೆರಿಗೆ ಆಗಿಲ್ಲ. ಸ್ಥಳೀಯರು ಹೆರಿಗೆಗೆ ಬಂದರೆ ಔಷಧಿ ಮತ್ತು ಇಂಜೆಕ್ಷನ್ ಇಲ್ಲ ಎಂದು ಸುಳ್ಳು ಹೇಳಿ ಕಳಿಸುತ್ತಾರೆ. ಆದಾಗ್ಯೂ, ದಾಖಲಾತಿ ಪುಸ್ತಕದಲ್ಲಿ ಹೆರಿಗೆ ಆಗಿರುವ ಕುರಿತು ನಮೂದಿಸುತ್ತಾರೆ ಎಂದು ಅವರು ಆರೋಪಿಸಿದರು.
ಕರ್ತವ್ಯಲೋಪ ಇಬ್ಬರು ಅಧಿಕಾರಿಗಳು ಅಮಾನತು
ಈ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿ ಎರಡು ತಿಂಗಳು ಕಳೆದರೂ ಸಹ ಇನ್ನೂ ಮಾಹಿತಿ ಕೊಡುತ್ತಿಲ್ಲ. ವೈದ್ಯಾಧಿಕಾರಿ ಕಲಬುರ್ಗಿಯಲ್ಲಿ ತಮ್ಮ ಸ್ವಂತ ನಿವಾಸದಲ್ಲಿ ಆಸ್ಪತ್ರೆ ನಡೆಸುತ್ತಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆ ನಡೆಸುವಂತಿಲ್ಲ. ಆ ಆದೇಶವನ್ನು ಗಾಳಿಗೆ ತೂರಿದ್ದಾರೆ. ಈ ಕುರಿತು ಕೇಳಿದರೆ ನಾನು ಹಪ್ತಾ ಕೊಡುತ್ತೇನೆ, ಯಾರೂ ಏನೂ ಮಾಡುವಂತಿಲ್ಲ ಎಂದು ಹೇಳುತ್ತಾರೆ. ಇಲ್ಲಿನ ಪ್ರಥಮ ದರ್ಜೆ ಗುಮಾಸ್ತ ಸಹ ವರ್ಷಕ್ಕೆ ಎರಡು ದಿನ ಮಾತ್ರ ಬರುತ್ತಾರೆ. ಅದೂ ಜನವರಿ ೨೬ ಮತ್ತು ಆಗಸ್ಟ್ ೧೫ಕ್ಕೆ ಮಾತ್ರ ಎಂದು ಅವರು ದೂರಿದರು.
ಕೂಡಲೇ ಕರ್ತವ್ಯಲೋಪ ಎಸಗುವ ಇಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ. ಏನಾದರೂ ಅನಾಹುತ ಆದಲ್ಲಿ ಅದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.