- ಡಾ. ಶಿವರಂಜನ್ ಸತ್ಯಂಪೇಟೆ
ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ತಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಡೋಜ ಮಹೇಶ ಜೋಶಿಯವರು ಇಂದು ಕಲಬುರಗಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ಇ-ಮೀಡಿಯಾ ಮಾತನಾಡಿಸಿತು. ಅದರ ವಿವರ ಇಲ್ಲಿದೆ.
ಪ್ರ: ಕಸಾಪ ಚುನಾವಣೆಗೆ ನಿಲ್ಲುವ ಉದ್ದೇಶವೇನು?
ಉತ್ತರ: ದೂರದರ್ಶನ ಚಂದನ ದೆಹಲಿ ಮತ್ತು ದಕ್ಷಿಣ ಭಾರತದ ಹೆಚ್ಚುವರಿ ಮಹಾ ನಿರ್ದೇಶಕನಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ನಾನು, ನನ್ನ ಕೈಲಾದಷ್ಟು ಕನ್ನಡ ಸೇವೆ ಮಾಡುವ ಉದ್ದೇಶವಿದೆ.
ಪ್ರ: ನಿಮ್ಮನ್ನು ಯಾಕೆ ಗೆಲ್ಲಿಸಬೇಕು?
ಉತ್ತರ: ನಾನು ಕಸಾಪ ಸ್ಪರ್ಧಾಳು ಅಲ್ಲ. ನಾನು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆಕಾಂಕ್ಷಿ ಅಲ್ಲ. ಕನ್ನಡದ ಸೇವಾಕಾಂಕ್ಷಿ.
ಪ್ರ: ನೀವು ಆಯ್ಕೆಯಾದರೆ ಮಾಡುವ ಕೆಲಸವೇನು?
ಉತ್ತರ: ಮತದಾರ ಪ್ರಭುಗಳು ನನ್ನನ್ನು ಆಯ್ಕೆ ಮಾಡಿದರೆ ಕನ್ನಡದ ಸೇವೆಯ ಜೊತೆಗೆ ಕಸಾಪವನ್ನು ಜನೋಪಯೋಗಿ ಹಾಗೂ ಜನಪರವಾಗಿಸುತ್ತೇನೆ. ಈಗಿರುವ ಕಸಾಪ ಬೈಲಾವನ್ನು ತಿದ್ದುಪಡಿ ಮಾಡಲು ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸುವ ಮೂಲಕ ಕಾಲದ ಬದಲಾವಣೆಗೆ ಪರಿಷತ್ತು ಒಗ್ಗಿಕೊಳ್ಳುವಂತೆ ಮಾಡುತ್ತೇನೆ.
ಪ್ರ: ಸಂತ ಶಿಶುನಾಳ ಶರೀಫ್ ಮತ್ತು ಅವರ ಗುರುಗಳಾದ ಗುರುಗೋವಿಂದ ಭಟ್ಟರ ಟ್ರಂಪ್ ಕಾರ್ಡ್ ಚುನಾವಣೆಯಲ್ಲಿ ಯಶಸ್ವಿಯಾಗಬಹುದೇ?
ಉತ್ತರ: ನಮ್ಮದು ಬಹುತ್ವದ ನಾಡು, ಇಲ್ಲಿ ಭಾವೈಕ್ಯತೆಯಲ್ಲಿ ಐಕ್ಯತೆ ಕಾಣುವುದು ಮುಖ್ಯವಾಗಿದೆ. ಮೇಲಾಗಿ ನಮ್ಮಜ್ಜ ಆ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಿದ್ದಾಗ ಈ ಟ್ರಂಪ್ ಕಾರ್ಡ್ ನ್ನು ನಾನು ಬಳಸುವುದರಲ್ಲಿ ತಪ್ಪೇನಿದೆ?
ಪ್ರ: ನೀವು ಕಸಾಪ ಕಟ್ಟುವ ಬಗೆ ಹೇಗೆ?
ಉತ್ತರ: ಸದಸ್ಯತ್ವ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸುವುದು, ವೆಬ್ ಸೈಟ್ ಮೂಲಕ ಕಸಾಪ ಕಾರ್ಯಚಟುವಟಿಕೆಗಳನ್ನು ಸೀಮಿತ ವರ್ಗಕ್ಕೆ ತಲುಪಿಸುವುದು, ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಅಲ್ಲಿರುವ ಕನ್ನಡ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದು ಸೇರಿದಂತೆ ನನ್ನದೇ ಆದ ಹಲವು ಯೋಜನೆ-ಯೋಚನೆಗಳನ್ನು ಹಾಕಿಕೊಂಡಿದ್ದೇನೆ.
ಪ್ರ: ಕನ್ನಡ ಅನ್ನದ ಭಾಷೆ ಆಗುವುದು ಯಾವಾಗ?
ಉತ್ತರ: ಕನ್ನಡಿಗರಿಗೆ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲರ ಗಮನ ಸೆಳೆದು ಕನ್ನಡ ಅನ್ನದ ಭಾಷೆಯಾಗಲು ಭಗೀರಥ ಪ್ರಯತ್ನ ನಡೆಸುತ್ತೇನೆ. ಅಖಿಲ ಭಾರತ ಮಟ್ಟದ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ಮಾಧ್ಯಮವನ್ನಾಗಿ ಮಾಡಿಸುತ್ತೇನೆ.