ಶಹಾಬಾದ: ನ್ಯೂಯಾರ್ಕನಲ್ಲಿ ಕ್ಲಾರಾ ಜೆಟಶಿನ್ ಎಂಬ ಕಾರ್ಮಿಕಳು,ಕೆಲಸಕ್ಕಾಗಿ,ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೇ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ.ಈ ಸಂಘರ್ಷದಿಂದ ಸಾಧಿಸಿದ ದಿನ ಒಂದು ಸ್ಮರಣೆಯ ದಿನವೇ ಮಹಿಳಾ ದಿನ ಎಂದು ಎಸ್.ಜಿ.ವರ್ಮಾ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಹೇಳಿದರು.
ಅವರು ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಸಂಸ್ಥೆ೧೯೭೫ರಲ್ಲಿ ಈ ದಿನವನ್ನು ವಿಶ್ವ ಮಹಿಳಾ ದಿನಾಚರಣೆ ಎಂದು ಘೋಷಿಸಿದೆ.ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕಾಲವಿತ್ತು.ಮಾತ್ರವಲ್ಲ ಮತದಾನ ಮಾಡುವ ಹಕ್ಕು ಇರಲಿಲ್ಲ. ಯಾವುದೇ ರೀತಿಯ ಸ್ವಾತಂತ್ರ್ಯ, ಸ್ವ-ನಿರ್ಧಾರ, ಇಚ್ಛೆಗಳಿಗೆ ಬೆಲೆ ಇರುತ್ತಿರಲಿಲ್ಲ.ಆಕೆಯನ್ನು ಅಬಲೆಯಾಗಿ ಪರಿಗಣಿಸಿ ಶೋಷಣೆ ಮಾಡುವ ಕಾಲವಿತ್ತು.ಮಹಿಳೆಗೆ ಎಲ್ಲಾ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿದ್ದಳು.ಆದರೆ . ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬಹು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಆದ್ದರಿಂದ ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರು ಸಂಘಟಿತರಾಗಬೇಕು. ಅದಕ್ಕೆ ಎಲ್ಲಾ ಮಹಿಳೆಯರೂ ಕೈ ಜೋಡಿಸಬೇಕೆಂದು ಹೇಳಿದರು.
ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ ಮಾತನಾಡಿ, ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ.ಇದರ ವಿರುದ್ಧ ಮಹಿಳೆಯರು ಜಾಗೃರಾಗಬೇಕಿದೆ.ಮಹಿಳೆಯರೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಿ ಬರುವ ಯಾವುದೇ ತೊಂದರೆ,ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಶಿರೋಮಣಿ ದಯಾಲ, ಜಗದೇವಿ ಅಗಸ್ತ್ಯತೀರ್ಥ, ನೈನಾ ಚಪ್ಪಳಗಾಂವಕರ್, ಮಹೇಶ್ವರಿ ಗುಳಿಗಿ ಸೇರಿದಂತೆ ಅನೇಕರು ಹಾಜರಿದ್ದರು.