ಹೆದ್ದಾರಿ ತಡೆದು ಪ್ರತಿಭಟನೆ: ಬಸ್ ನಿಲ್ಲಿಸಿ ಕಾಲ್ನಡಿಗೆ ತಪ್ಪಿಸಿ: ವಿದ್ಯಾರ್ಥಿಗಳ ಆಗ್ರಹ

0
71

ವಾಡಿ: ಕಲಬುರಗಿ ಹಾಗೂ ಯಾದಗಿರಿ ನಡುವೆ ಸಂಚರಿಸುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿ ಬದಿಯ ಹಳಕರ್ಟಿ ಗ್ರಾಮದ ಬಸ್ ನಿಲ್ದಾಣ ಬಳಿ ನಿಲ್ಲದೆ ಓಡುತ್ತವೆ. ಇದು ನಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಬಸ್ ನಿಲ್ಲಿಸಿ ಕಾಲ್ನಡಿಗೆ ತಪ್ಪಿಸಿ ಎಂಬ ಘೋಷಣೆಯೊಂದಿಗೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಮಂಗಳವಾರ ಹಳಕರ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ತಡೆದು ಸಾರಿಗೆ ಸಂಸ್ಥೆ ವಿರುದ್ಧ ಧಿಕ್ಕಾರ ಕೂಗಿದ ಗ್ರಾಮದ ನೂರಾರು ವಿದ್ಯಾರ್ಥಿಗಳು, ಹಳಕರ್ಟಿ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಲಾಭವನ್ನೇ ಮೂಲ ಗುರಿಯಾಗಿಸಿಕೊಂಡಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಶುಲ್ಕ ಭರಿಸಿ ಪಾಸ್ ಪಡೆದ ನಮ್ಮನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಪುಸ್ತಕ ಹಿಡಿದು ನಿಂತ ಹುಡುಗರನ್ನು ಕಂಡರೆ ಚಾಲಕ ಬಸ್ ನಿಲ್ಲಿಸುವುದಿಲ್ಲ. ಶಿಕ್ಷಣ ಕಲಿಯಲು ನಗರಕ್ಕೆ ಹೋಗುವ ನಾವು ಬಸ್‌ಗೆ ಭಾರವಾಗಿದ್ದೇವೆ ಎಂಬಂತೆ ವರ್ತಿಸಲಾಗುತ್ತಿದೆ ಎಂದು ದೂರಿದರು.

Contact Your\'s Advertisement; 9902492681

ರಾಜ್ಯ ನದಾಫ್, ಪಿಂಜಾರ್ ಸಂಘದಿಂದ ಸನ್ಮಾನ ಸಮಾರಂಭ ನಾಳೆ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಮುಖಂಡರು, ರಾಷ್ಟ್ರೀಯ ಹೆದ್ದಾರಿ ಮೇಲೆ ೫೦ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಹಳಕರ್ಟಿ ಗ್ರಾಮ ಸೇರಿದಂತೆ ಇತರ ಗ್ರಾಮೀಣ ಪ್ರದೇಶಗಳಿಂದ ಕಲಬುರಗಿ, ಯಾದಗಿರಿ, ವಾಡಿ, ಶಹಾಬಾದ, ಚಿತ್ತಾಪುರ ನಗರಗಳ ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರಯಾಣ ಬೆಳೆಸುತ್ತಾರೆ. ಬಸ್‌ಗಳಿಗೆ ಕೈ ಮಾಡಿದರೂ ನಿಲ್ಲುವುದಿಲ್ಲ. ಪರಿಣಾಮ ಹಳಕರ್ಟಿ ಗ್ರಾಮದಿಂದ ವಾಡಿ ನಗರದ ವರೆಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ಬಂದು ಬಸ್ ಹತ್ತಬೇಕಾದ ದುಸ್ಥಿತಿ ಎದುರಾಗಿದೆ.

ಹೆದ್ದಾರಿ ಮೇಲೆ ವೇಗವಾಗಿ ಚಲಿಸುವ ಭಾರಿ ವಾಹನಗಳಿಂದ ಮಕ್ಕಳು ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕಾದ ಸಾರಿಗೆ ಸಂಸ್ಥೆಯು ಕೇವಲ ಲಾಭದಾಯಕ ಮನಸ್ಥಿತಿ ಹೊಂದಿದೆ. ಹಳಕರ್ಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಾಡಿ-ಯಾದಗಿರಿ ಹಾಗೂ ವಾಡಿ-ಚಿತ್ತಾಪುರ ನಡುವೆ ಲೋಕಲ್ ಬಸ್‌ಗಳ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದರು.

ಖಾಸಗೀಕರಣ ವಿರೋಧಿ ಸಾರ್ವಜನಿಕ ಸ್ವಾಮ್ಯದ ನೌಕರರ ಬೃಹತ್‌ ಪ್ರತಿಭಟನೆ

ಎಐಡಿಎಸ್‌ಒ ಗ್ರಾಮ ಘಟಕದ ಅಧ್ಯಕ್ಷ ದತ್ತಾತ್ರೇಯ ಹುಡೇಕರ, ವಾಡಿ ನಗರ ಘಟಕದ ಅಧ್ಯಕ್ಷ ಗೌತಮ ಪರತೂರಕರ, ಕಾರ್ಯರ್ಶಿ ವೆಂಕಟೇಶ ದೇವದುರ್ಗ, ಅರುಣಕುಮಾರ ಹಿರೆಬಾನರ, ಸಿದ್ದರಾಜ ಮದ್ರಿ, ಗೋವಿಂದ ಹೆಳವಾರ, ಮಲ್ಲಿನಾಥ ಹುಂಡೇಕಲ, ಶಿವಕುಮಾರ ಆಂದೋಲಾ, ವಿದ್ಯಾರ್ಥಿಗಳಾದ ಅಭೀಷೇಕ, ವಿನೋದ, ಸಾಬಣ್ಣ, ಕಿರಣ್, ವೀರೇಶ, ರೋಹಿತ, ಅನೀಲ, ಅನುರಾಧಾ, ಶೋಭಾ, ಮಮತಾ, ಅಂಬಿಕಾ, ಭಾಗ್ಯಶ್ರೀ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕಾಗಮಿಸಿ ಮನವಿಪತ್ರ ಸ್ವೀಕರಿಸಿದ ಸಾರಿಗೆ ಸಂಸ್ಥೆಯ ಡಿಟಿಒ ಮಹ್ಮದ್ ಖಾದರ್, ಬಸ್ ನಿಲ್ಲಿಸುವುದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here