ಶಹಾಪುರ : ಸಗರ ಗ್ರಾಮದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಆವರಣದೊಳಗೆ ಎಲ್ಲೆಂದರಲ್ಲಿ ಪೈಪು ಒಡೆದು ನೀರು ನಿಂತು ಸಂಪೂರ್ಣ ಹದಗೆಟ್ಟು ದುರ್ವಾಸನೆ ಬೀರುತ್ತಿದೆ ಅಲ್ಲದೆ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದೆ.
ಸ್ವಚ್ಛತೆಗಾಗಿ ಹಾಗೂ ವಸತಿ ನಿಲಯದ ನಿರ್ವಹಣೆಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದರೂ ಇಲ್ಲಿರುವ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ದುಸ್ಥಿತಿಗೆ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಪಾಲಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.ಬಂಧುತನದಲಿ ಸ್ವತ್ಛತೆ ಕಾಪಾಡಿಕೊಂಡು ಉದ್ಯಾನವನವೂ ನಿರ್ಮಿಸಬಹುದು ಆದರೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಯಾಕೆ ಎಂಬುದು ನಮ್ಮ ಪ್ರಶ್ನೆ.
ವಸತಿ ನಿಲಯದ ಅವ್ಯವಸ್ಥೆ ನೋಡಿ ವಿದ್ಯಾರ್ಥಿಗಳು ಹಾಗೂ ಪಾಲಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಕ್ಯಾರೆ ಎನ್ನುತ್ತಿಲ್ಲ ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಸರಿಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಎಚ್ಚರಿಕೆ ನೀಡಿದ್ದಾರೆ.