ಸೇಡಂ: ಇವತ್ತು ವೇದನೆಗೊಳಗಾದರೆ ನಾಳೆ ಸಾಧನೆ ಮಾಡುವುದಕ್ಕೆ ಸಾಧ್ಯ. ವೇದನೆ ಅನುಭವಿಸಿದರೆ ಸಾಧನೆಯ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ (ಜಿಪಿಎಸ್) ಯಲ್ಲಿ ಶನಿವಾರ ಬೆಳಿಗ್ಗೆ ಆಯೋಜಿಸಿದ್ದ ೨೦೦೯-೧೦ ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಅವಮಾನ, ನಾಳೆ ಸನ್ಮಾನ ಎಂಬುದನ್ನು ಮರೆಯಬಾರದು. ವಿದ್ಯಾರ್ಥಿ ಸಂದರ್ಭದಲ್ಲಿ ಎದೆಗೆ ಅಕ್ಷರದ ಬೀಜ ಬಿತ್ತಿದಕ್ಕಾಗಿಯೇ ಗುರುಗಳನ್ನು ನೆನಪು ಮಾಡಿಕೊಳ್ಳುವುದು. ಕಲಿಸಿದ ಮೇಷ್ಟ್ರುಗಳನ್ನು ಸತ್ಕರಿಸುವ ಮೂಲಕ ಉನ್ನತವಾದ ಸಂಸ್ಕಾರವನ್ನು ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಕಲಿಸಿದ ಶಾಲಾ ಗುರುಗಳನ್ನು ಎದುರಿಗೆ ಬಂದಾಗ ನೋಡದೇ ಹೋಗುವುದಕ್ಕಿಂತ ಅವರನ್ನು ಗೌರವಿಸುವ ಮೂಲಕ ಮಾದರಿಯಾಗಿದ್ದನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ದೃಷ್ಟಿಕೋನ ಬದಲಾವಣೆ ಮಾಡುವುದೇ ಶಿಕ್ಷಣದ ಉದ್ದೇಶ: ಬಡಶೇಷಿ
ಜಿಪಿಎಸ್ ಶಾಲೆಯ ಮುಖ್ಯಗುರು ಶ್ರೀನಿವಾಸರೆಡ್ಡಿ ಶಕಲಾಸಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ೨೦೦೯-೧೦ ನೇ ಸಾಲಿನಲ್ಲಿ ಜಿಪಿಎಸ್ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಿವಪೂಜಮ್ಮ, ತಂಗೆಮ್ಮ, ಸರೋಜಾ ಕುಲಕರ್ಣಿ, ಸುಧಾವತಿ, ಶಾಂತಾಬಾಯಿ, ರಾಜೇಶ್ವರಿ, ಸುಮಂಗಲಾ, ಶಿವಾಜಿ, ಮಹಾದೇವಪ್ಪ, ಈಶ್ವರಮ್ಮ, ಪದ್ಮಾವತಿ, ಮೌನೇಶ, ಮಂಜುಳಾ ಹಾಗೂ ಶಾರೀರಿಕ ಶಿಕ್ಷಕಿ ಸಾಬಮ್ಮ ಅವರಿಗೆ ವಿದ್ಯಾರ್ಥಿಗಳು ಸತ್ಕರಿಸಿದರು.
ಶಿಕ್ಷಕಿ ಶಿವಪೂಜಮ್ಮ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರನ್ನು ಮೀರಿಸುವಂತಾಗಬೇಕು. ಉನ್ನತ ಹುದ್ದೆಯಲ್ಲಿ ಕಂಡಾಗ ಆಗುವ ಸಂತೋಷಕ್ಕಿಂತ ಬೇರೊಂದಿಲ್ಲ ಎಂದು ಹೇಳಿ, ತಮ್ಮ ಶಿಷ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಸಾಗರ್ ಎಂಬಾತನನ್ನು ಸತ್ಕರಿಸಿದರು. ವಿದ್ಯಾರ್ಥಿಗಳಾದ ಪೂಜಾ, ತ್ರಿವಿಕ್ರಮ ಜೋಶಿ, ಪೂಜಾ ನಿಡಗುಂದಾ ಮಾತನಾಡಿ, ಗತಕಾಲದ ನೆನಪುಗಳನ್ನು ಸ್ಮರಿಸಿಕೊಂಡರು. ಪ್ರಾಸ್ತಾವಿಕ ಮಾತನಾಡಿದ ಕಾರ್ಯಕ್ರಮ ಆಯೋಜಕ ಮಹೇಶ ಅಲ್ಲೂರ ಕಾರ್ಯಕ್ರಮ ನಿರೂಪಿಸಿದರು.
ಭವಾನಿ ಪ್ರಾರ್ಥನಾ ಗೀತೆ ಹಾಡಿದರು. ಬಿಸಿಯೂಟದ ಅಡುಗೆ ಮಾಡುವ ಸುಲೋಚನಾ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳಾದ ಕರಬಸಯ್ಯ, ರಾಹುಲ್, ಬಸ್ಸು, ಉಮೇಶ, ನಾಗರಾಜ್, ಆಕಾಶ್, ಮಲ್ಲು ಪತ್ರಿ, ಶಾಬೋದ್ದಿನ್, ಶ್ರವಣ್, ಶ್ಯಾಮ್, ಮಲ್ಲು, ದೇವು ಪಂಚಾಳ, ದೇವರಾಜ್, ವಸೀಂ ಪಟೇಲ್, ತಮ್ಮಣ್ಣ, ಆಕಾಶ್ ಖಜೂರಿ, ಸಂಜು, ಸುನೀಲ್, ಸಿದ್ದು, ಗಂಗು, ನಾಗರಾಜ ಬೋಳದ, ಶ್ರೀದೇವಿ ಟೆಂಗಳಿ, ಅನ್ನಪೂರ್ಣ, ಪೂಜಾ, ವಾಣಿ, ಸುಜಾತಾ, ಗೀತಾ, ಶೈಲಜಾ, ಶ್ರೀಕಾಂತ ಇತರರಿದ್ದರು. ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳು ಜಿಪಿಎಸ್ ಶಾಲೆಗೆ ಅಲ್‌ಮಾರಾವನ್ನು ಕೊಡುಗೆಯಾಗಿ ನೀಡಿದರು.