ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸಲು ನಿರ್ಧಾರ: ಸಿಎಂ

0
62

ಕಲಬುರಗಿ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ನನ್ನ ಗಮನ ಸೆಳೆದಿದ್ದು, ಈ ಸಂಬಂಧ ಸುಮಾರು 500 ಕೋಟಿ ರೂ.ಗಳ ವಿವಿಧ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ್ದರು.
ಕಳೆದ ಜೂನ್ 22 ರಂದು ಜಿಲ್ಲೆಯ ಹೇರೂರ(ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಗದಿಪಡಿಸಲಾಗಿತ್ತಾದರು ಮಳೆಯ ಕಾರಣ ಅದು ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ ಗ್ರಾಮ ವಾಸ್ತವ್ಯವನ್ನು ಹೇರೂರ(ಬಿ)ನಲ್ಲಿಯೆ ಮಾಡಲಾಗುವುದು ಎಂದ ಮುಖ್ಯಮಂತ್ರಿಗಳು, ಈ ಕುರಿತು ಜುಲೈ ಮಾಹೆಯಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಹೇರೂರು(ಬಿ) ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಈಗಾಗಲೆ ಲೋಕೋಪಯೋಗಿ ಇಲಾಖೆಯಿಂದ 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಗ್ರಾಮದ ಮೂಲಸೌಕರ್ಯಕ್ಕಾಗಿ 5ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಗ್ರಾಮ ವಾಸ್ತವ್ಯ ಮಾಡಲಿರುವ ಗ್ರಾಮಗಳಿಗೆ ಮಾತ್ರ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ಅಪಾರ್ಥ ಬೇಡವೆಂದ ಮುಖ್ಯಮಂತ್ರಿಗಳು, ರಾಜ್ಯದ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಲೆದೇ ಗ್ರಾಮ ವಾಸ್ತವ್ಯ ಆರಂಭಿಸಿದ್ದೇನೆ, ಜನರು ನೋವು ನಲಿವುಗಳಿಗೆ ಸ್ಪಂದಿಸುವುದು ಇದರ ಮೂಲ ಉದ್ದೇಶ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಠಪಡಿಸಿದರು.

ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರ ರಾಜ್ಯದಿಂದ ನೀರು ಹರಿಸಲು ರಾಜ್ಯ ಸರ್ಕಾರವು ಮಹಾರಾಷ್ಟ್ರ ಸರ್ಕಾರದ ಸತತ ಸಂಪರ್ಕದಲ್ಲಿದೆ. ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭೀಮಾ ನದಿ ಪ್ರದೇಶದಲ್ಲಿ ತಲಾ ೧೦ ಕಿ.ಮಿ. ಅಂತರದಲ್ಲಿ ಬ್ಯಾರೇಜ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಪೊಲೀಸ್ ಆಯುಕ್ತರ ನೇಮಕ:- ಕಲಬುರಗಿ ಪೊಲೀಸ್ ಆಯುಕ್ತಾಲಯ ಸ್ಥಾಪನೆಯಾಗಿ ೪-೫ ತಿಂಗಳು ಕಳೆದರು ಇದುವರೆಗೆ ಆಯುಕ್ತರು ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳ ನೇಮಕಾತಿಯಾಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗುವುದು ಎಂದರು.
ಹೈ.ಕ.ಮಂಡಳಿಗೆ ೧೫೦೦ ಕೋಟಿ ರೂ. ಅನುದಾನ:- ಆಯವ್ಯಯದಲ್ಲಿ ಘೋಷಣೆಯಂತೆ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ೧೫೦೦ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಅನುದಾನ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಯಾವುದೆ ಅನುಮಾನ ಬೇಡ. ಮಂಡಳಿಗೆ ಈಗಾಗಲೆ ಬಿಡುಗಡೆ ಮಾಡಿರುವ ಅನುದಾನ ಖರ್ಚು ಮಾಡಿ ಮುಂದಿನ ಹಂತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅನುದಾನ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಸೇರಿದಂತೆ ಇನ್ನಿತರು ಇದ್ದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಈಶಾನ್ಯ ಪೊಲೀಸ್ ಮಹಾನಿರೀಕ್ಷಕ ಮನೀಷ್ ಖರ್ಬಿಕರ್, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ರಾಜಾ ಪಿ. ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆರದಿದ್ದ ಜನರಿಂದ ಅಹವಾಲನ್ನು ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here