ಸುರಪುರ: ನಗರದ ಹಳೆ ತಹಸೀಲ್ ಕಚೇರಿ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಈಗಾಗಲೆ ಮುಂಗಾರು ಆರಂಭಗೊಂಡಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.ಅದರಂತೆ ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾಗುವ ಬೀಜ ಗೊಬ್ಬರ ಲಭ್ಯವಿದ್ದು ರೈತರು ಪಡೆದುಕೊಳ್ಳುವಂತೆ ಕರೆ ನೀಡಿದರು.ಅಲ್ಲದೆ ಅಧಿಕಾರಿಗಳಿಗೂ ಸೂಚನೆ ನೀಡಿ,ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಿ ಏನಾದರು ಅಗತ್ಯವಾಗಿದ್ದಲ್ಲಿ ಗಮನಕ್ಕೆ ತರುವಂತೆ ತಿಳಿಸಿದರು.
ನಂತರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ದೇವಿಕಾ ಆರ್.ಮಾತನಾಡಿ,ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಹತ್ತಿ ತೊಗರಿ ಬೀಜಗಳ ದಾಸ್ತಾನಿದ್ದು ರೈತರು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಅಲ್ಲದೆ ಈಬಾರಿ ಜಿಆರ್‍ಜಿ 811 ಎನ್ನುವ ಹೊಸ ತೊಗರಿ ತಳಿ ಬಂದಿದ್ದು ಇದು ಉತ್ತಮ ಇಳುವರಿ ನೀಡಲಿದೆ ಎಂದು ಮಾಹಿತಿ ನೀಡಿದರು.ಅಲ್ಲದೆ ಹೆಸರಿನ ಹೊಸ ತಳಿ ಬಿಜಿಎಸ್9 ಪಡೆದುಕೊಳ್ಳುವಂತೆ ತಿಳಿಸಿ,ಇನ್ನು ಮೆಕ್ಕೆಜೋಳ ಸಜ್ಜೆ ಬೀಜಗಳು ಬರಬೇಕಿದೆ ಎಂದು ಮಾಹಿತಿ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಗುರುನಾಥ ಮಾತನಾಡಿ,ಹೆಸರು 5 ಕೆ.ಜಿ ಚೀಲಕ್ಕೆ ಎಸ್.ಸಿ ಮತ್ತು ಎಸ್ಟಿ ಸಮುದಾಯಕ್ಕೆ 435 ರೂಪಾಯಿ ಹಾಗು ಸಾಮಾನ್ಯ ವರ್ಗಕ್ಕೆ 495 ರೂಪಾಯಿ ಇರುವುದಾಗಿ ತಿಳಿಸಿದರು.ಈಬಾರಿ ಸುರಪುರ ತಾಲೂಕಿನಲ್ಲಿ 30 ಸಾವಿರ 37 ಹೆಕ್ಟೆರ್ ಮತ್ತು ಹುಣಸಗಿ 21 ಸಾವಿರದ 666 ಹೆಕ್ಟರ್ ಹೀಗೆ ಎಲ್ಲವು ಶೇರಿ ಸುರಪುರ ಮತ್ತು ಹುಣಸಗಿಯ ಒಟ್ಟು 1 ಲಕ್ಷ 47 ಸಾವಿರ 104 ಹೆಕ್ಟರ್ ಪ್ರದೇಶ ಬಿತ್ತನೆ ಗುರಿ ಹೊಂದಲಾಗಿದೆ ಹಾಗು ರಸಗೊಬ್ಬರವು ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಕೃಷಿ ಉಪ ನಿರ್ದೇಶಕ ಬಾಲರಾಜ್ ಪಿಐ ಎಸ್.ಎಮ್.ಪಾಟೀಲ್ ಟಿಹೆಚ್‍ಒ ಡಾ:ಆರ್.ವಿ.ನಾಯಕ ಎಡಿಎ ವಿಜಿಯನ್ಸ್ ರೂಪಾ ಆರ್.ಐ ಗುರುಬಸಪ್ಪ ವಿಠ್ಠಲ್ ಬಂದಾಳ ಮುಖಂಡ ರಂಗನಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.