ಶಹಾಬಾದ: ನಗರದ ಸಮೀಪದ ಕಾಗಿಣಾ ನದಿಯಿಂದ ಉಂಟಾಗುವ ನೆರೆ ಹಾವಳಿ ತಡೆಯಲು ಮುಂಜಾಗೃತವಾಗಿ ನದಿಗೆ ಹೊಂದಿಕೊಂಡಿರುವ ಗೋಳಾ(ಕೆ) ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್‌ಗೆ ಸೇಡಂ ಎಸಿ ಅಶ್ವಿಜಾ.ಬಿ.ವಿ ಅವರ ಮಂಗಳವಾರ ಬೇಟಿ ನೀಡಿ ಪರಿಶೀಲಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಕಳೆದ ಮೂರು ದಿನಗಳ ಹಿಂದಷ್ಟೆ ಸುಮಾರು ಐದಾರು ದಿನ ಉತ್ತಮವಾಗಿ ಮಳೆಯಾಗಿ ನದಿ ತುಂಬಿಕೊಂಡು ಹರಿದಿದೆ.ಆದರೆ ಅಪಾಯ ಮಟ್ಟ ಮೀರಿ ಹರಿದಿಲ್ಲ.ಕಳೆದ ವರ್ಷ ನಿರಂತರವಾಗಿ ಮಳೆಯಿಂದ ಅಪಾಯಕ್ಕೂ ಮೀರಿ ನೆರೆ ಹಾವಳಿಯಾಗಿ ತುಂಬಾ ಹಾನಿಯುಂಟು ಮಾಡಿತ್ತು.ಅಲ್ಲದೇ ನದಿ ಸಮೀಪದಲ್ಲಿ ಸಿಲುಕಿದ ಜನರನ್ನು ನೀರಿನಿಂದ ಹೊರತರಲಾಗಿತ್ತು.ರೈತರ ಭೂಮಿಯಲ್ಲಿ ನೀರು ತುಂಬಿಕೊಂಡು ಬೆಳೆಯೆಲ್ಲಾ ಹನಿಯಾಗಿದನ್ನು ತಹಸೀಲ್ದಾರ ಸುರೇಶ ವರ್ಮಾ ಸೇಡಂ ಎಸಿ ಅಶ್ವಿಜಾ.ಬಿ.ವಿ ಅವರ ಗಮನಕ್ಕೆ ತಂದರು.
ಸದ್ಯ ನೆರೆ ಹಾವಳಿ ಆಗಿಲ್ಲದಿದ್ದರೂ ಮಳೆಗಾಲ ಇರುವುದರಿಂದ ಮುಂದೆ ಮಳೆ ಬರುವ ಸಾಧ್ಯತೆ ಇದೆ.ಆದ್ದರಿಂದ ಮುಂಜಾಗೃತೆ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸಿ. ನೆರೆ ಹಾವಳಿ ಆಗುವ ಲಕ್ಷಣಗಳಿದ್ದರೇ ಜನರಿಗೆ ಮುಂಚಿತವಾಗಿ ಜಾಗೃತಗೊಳಿಸಿ. ಅಲ್ಲದೇ ತಾಲೂಕಾಡಳಿತ ಮುಂಜಾಗೃತ ಕ್ರಮವಾಗಿ ಸಂಗ್ರಹಿಸಲಾದ ನೀರಿನಲ್ಲಿ ತೇಲುವ ಜಾಕೆಟ್ ಇತರ ಸಾಮಗ್ರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ನಂತರ ನಗರದ ಇಎಸ್‌ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು. ಕೆಲಸ ಭರದಿಂದ ಸಾಗುತ್ತಿದೆ. ಈ ಕೆಲಸ ಯಾವಾಗ ಮುಗಿಸುತ್ತೀರಿ ಎಂದು ಲೋಕೋಪಯೋಗಿ ಇಲಾಖೆಯ ಎಇ ಜಗನ್ನಾಥ ಅವರನ್ನು ಕೇಳಿದರು.ಈಗಾಗಲೇ ೯೦%ರಷ್ಟು ಕೆಲಸ ಮುಗಿದಿದ್ದು, ಅಗಸ್ಟ ೧೦ರ ಒಳಗಾಗಿ ಮುಗಿಯುತ್ತದೆ ಎಂದು ಹೇಳಿದರು. ಆಸ್ಪತ್ರೆಯಯಲ್ಲಿ ಸುತ್ತು ಹಾಕಿ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಆದಷ್ಟು ಬೇಗನೆ ಕಾಮಗಾರಿ ಮುಗಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ನೆರೆ ಹಾವಳಿಯ ನೋಡಲ್ ಅಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ತಾಪಂ ಇಓ ಲಕ್ಷ್ಮಣ ಶೃಂಗೇರಿ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಇತರರು ಇದ್ದರು.